ಶಾಲೆಯಲ್ಲಿ ಶೌಚಗೃಹ ಸ್ವಚ್ಚತೆ ಮನೆಯಲ್ಲಿ ತಲೆಸುತ್ತಿನಿಂದ ಬಿದ್ದ ವಿದ್ಯಾರ್ಥಿನಿ

6RMN-MGD P4
Published on

ಮಾಗಡಿ: ಶಾಲೆಯ ಶೌಚಗೃಹ ಸ್ವಚ್ಛಗೊಳಿಸುವ ವೇಳೆ ವಿದ್ಯಾರ್ಥಿನಿಯೊಬ್ಬಳು ತಲೆ ಸುತ್ತು ಬಂದು ಬಿದ್ದು ಆಸ್ಪತ್ರೆ ಸೇರಿದ್ದಾಳೆ.
ತಾಲೂಕಿನ ತೂಬಿನಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಹೇಮಲತಾ ಆಸ್ಪತ್ರೆ ಸೇರಿದವಳು. ಈಕೆ ಚಿಕ್ಕಹನುಮಯ್ಯ ಎಂಬುವರ ಪುತ್ರಿ.

ಅ.6ರಂದು ಮಧ್ಯಾಹ್ನ 3.30 ಗಂಟೆಯಲ್ಲಿ ಮುಖ್ಯಶಿಕ್ಷಕ ಸಿದ್ದಲಿಂಗಯ್ಯ, ಶಿಕ್ಷಕ ಸಿದ್ದರಾಜು ಎಂಬುವರು ಶಾಲೆಯ ಶೌಚಗೃಹ ಸ್ವಚ್ಛಗೊಳಿಸುವಂತೆ ಹೇಮಲತಾಗೆ ಆಸಿಡ್ ಮತ್ತು ಬ್ಲೀಚಿಂಗ್ಡ ಪೌಡರ್ ಕೊಟ್ಟು  ಕಳಿಸಿದ್ದು, ಶೌಚಗೃಹ ಸ್ವಚ್ಛಗೊಳಿಸಿದ ನಂತರ ಮನೆಗೆ ತೆರಳಿದ ಹೇಮಲತಾ ತಲೆಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ಬಾಲಕಿಯನ್ನು ಮಾಗಡಿ ಆಸ್ಪತ್ರೆಗೆ ಸೇರಿಸಲಾಗಿದೆ.

ಕರೆ ಸ್ವೀಕರಿಸದ ಶಿಕ್ಷಕರು

ಘಟನೆ ಬಗ್ಗೆ ಶಿಕ್ಷಕರಿಗೆ ಕರೆ ಮಾಡಿದರೆ ಇಬ್ಬರೂ ಕರೆ ಸ್ವೀಕರಿಸಲಿಲ್ಲ. ಮಾನವೀಯತೆಯಿಂದಾದರೂ ಶಿಕ್ಷಕರು ಆಸ್ಪತ್ರೆಗೆ ತೆರಳಿ ಮಗಳ ಆರೋಗ್ಯ ವಿಚಾರಿಸಿಲ್ಲ ಎಂದು ಹೇಮಲತಾ ತಂದೆ ಚಿಕ್ಕಹನುಮಯ್ಯ ಆರೋಪಿಸಿದ್ದಾರೆ.

ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ವಿದ್ಯಾರ್ಥಿನಿ ಶಾಲೆಯಲ್ಲಿಯೇ ತಲೆಸುತ್ತು ಬಂದು ಬಿದ್ದರೂ ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿದ್ದಾರೆ. ಜವಾಬ್ದಾರಿಯುತ ಶಿಕ್ಷಕರು ಚಿಕ್ಕಮಕ್ಕಳಿಂದ ಶೌಚಗೃಹ ಸ್ವಚ್ಛಗೊಳಿಸುವುದು ಸರಿಯಲ್ಲ, ಶೌಚಗೃಹ ಸ್ವಚ್ಛತೆ ಮತ್ತು ನಿರ್ವಹಣೆಗೆ ಸರ್ಕಾರ ಹಣ ನೀಡುತ್ತದೆ. ಇದನ್ನು ಬಳಸಿಕೊಳ್ಳಬೇಕಾದ ಶಿಕ್ಷಕರು ಮಕ್ಕಳನ್ನು ಶೌಚಗೃಹ ಬಳಕೆಗೆ ಬಳಸಿಕೊಂಡಿರುವುದು ಎಷ್ಟು ಸರಿ. ಈ ಶಿಕ್ಷಕರ ವಿರುದ್ದ ಶಿಕ್ಷಣ ಇಲಾಖೆ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net