

ಹರಿಹರ: ನಗರದ ಹರಪನಹಳ್ಳಿ ರಸ್ತೆಯ ಹಳೆ ಕೋರ್ಟ್ ಹಿಂಭಾಗದ ನೀರಿನ ಟ್ಯಾಂಕ್ ಪಕ್ಕದಲ್ಲಿರುವ ಗೃಹ ರಕ್ಷಕ ದಳದ ಕಚೇರಿ ಛಾವಣಿ ಶನಿವಾರ ಸುರಿದ ಮಳೆಗೆ ಕುಸಿದು ಬಿದ್ದಿದೆ.
ಭಾನುವಾರ ಕವಾಯತ್ಗೆ ಬಂದಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಕಚೇರಿ ಬೀಗ ತೆಗೆದು ನೋಡಿದಾಗ, ಎರಡು ಕಡೆ ಹೆಂಚಿನ ಛಾವಣಿ ಕುಸಿದು ಬಿದ್ದಿದ್ದು, ಒಳಗೆಲ್ಲ ನೀರು, ಕಸ ಕಡ್ಡಿ ಬಿದ್ದಿರುವುದು ಕಂಡು ಬಂದಿದೆ.
ಪೊಲೀಸ್ ಪಡೆಗೆ ಪೂರಕವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ, ಸಾರ್ವಜನಿಕರ ಆಸ್ತಿ, ಪಾಸ್ತಿಗಳ ರಕ್ಷಣೆ, ಸಂಚಾರ ನಿಯಂತ್ರಣ, ಪ್ರವಾಹ ಮತ್ತು ಬೆಂಕಿ ಅನಾಹುತ ಇನ್ನಿತರ ಸಂದರ್ಭದಲ್ಲಿ ಜನರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವ ಗೃಹ ರಕ್ಷಕ ದಳಕ್ಕೆ ನಗರದಲ್ಲಿ ಸ್ವಂತ ಕಟ್ಟಡವಿಲ್ಲ. ನಗರ ಸಭೆಗೆ ಸೇರಿದ ಹಳೆಯ ಶಿಥಿಲಗೊಂಡ ಕಟ್ಟಡವನ್ನೇ ಕಚೇರಿಯಾಗಿ ಉಪಯೋಗಿಸಿಕೊಂಡು ಬರಲಾಗುತ್ತಿದೆ.
51 ಪುರುಷ, 20 ಮಹಿಳಾ ಸಿಬ್ಬಂದಿ ಸೇರಿ 71 ಸ್ವಯಂ ಸೇವಕರಿರುವ ಗೃಹರಕ್ಷಕ ದಳದಲ್ಲಿ ಗ್ರಾಮೀಣ ಭಾಗದ ಹಲವು ಜನರಿದ್ದು ಉಳಿದುಕೊಳ್ಳಲು ಹಾಗೂ ಮಹಿಳೆಯರಿಗೆ ಬಟ್ಟೆ ಬದಲಿಸುವ ಒಂದು ಕೊಠಡಿಯಿಲ್ಲ. ಬಹುಮುಖ್ಯವಾಗಿ ಶೌಚಗೃಹ ಸಹ ಇಲ್ಲದ ದುಸ್ಥಿತಿ ಇದೆ.
ಸ್ವಂತ ಕಟ್ಟಡ ನಿರ್ವಿುಸಿಕೊಳ್ಳಲು ನಿವೇಶನಕ್ಕಾಗಿ ಕಳೆದ 20 ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆರೋಗ್ಯ ಇಲಾಖೆ ಮತ್ತು ನಗರಸಭೆಗೆ ಸೇರಿದ ಹಲವಾರು ಕಟ್ಟಡಗಳು ಖಾಲಿ ಇದ್ದರೂ ತಾತ್ಕಾಲಿಕವಾಗಿ ಉಪಯೋಗಿಸಿಕೊಳ್ಳಲು ನೀಡುತ್ತಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗೃಹರಕ್ಷಕ ದಳಕ್ಕೆ ಕಚೇರಿ ಕಟ್ಟಡ ನಿರ್ವಿುಸಿಕೊಳ್ಳಲು ಒಂದು ನಿವೇಶನ ಮತ್ತು ತಾತ್ಕಾಲಿಕವಾಗಿ ಉಳಿಯಲು ಎರಡು ಕೊಠಡಿ ನೀಡುತ್ತಾರೆಯೇ ಕಾದು ನೋಡಬೇಕಿದೆ.
ಮನವಿಗೂ ಸ್ಪಂದಿಸುತ್ತಿಲ್ಲ: ಹಲವು ವರ್ಷಗಳಿಂದ ನಿವೇಶನ ಕೋರಿ ಸ್ಥಳೀಯ ಶಾಸಕರಿಗೆ, ನಗರಸಭಾ ಆಡಳಿತಕ್ಕೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ನಮ್ಮನ್ನು ಮರೆತು ಬಿಡುತ್ತಾರೆ ಎಂದು ಗೃಹರಕ್ಷಕ ದಳ ಸಾರ್ಜೆಂಟ್ ಎಸ್. ಕೇಶವ ಬೇಸರ ವ್ಯಕ್ತಪಡಿಸಿದರು.
ಕಟ್ಟಡದ ಛಾವಣಿ ಮಾತ್ರ ಈಗ ಕುಸಿದಿದ್ದು, ಮುಂದೆ ಇಡೀ ಕಟ್ಟಡವೇ ಕುಸಿಯುವ ಅಪಾಯವಿದೆ. ನಗರಸಭೆಗೆ ಸೇರಿದ ಈ ಜಾಗ ಅಥವಾ ಬೇರೆ ನಿವೇಶನ ನೀಡಿದಲ್ಲಿ ನೂತನ ಕಟ್ಟಡ ನಿರ್ವಿುಸಲು ಕೇಂದ್ರ ಕಚೇರಿಯಿಂದ 5 ಲಕ್ಷ ರೂ. ಅನುದಾನ ನೀಡುತ್ತಾರೆ. ಶಾಸಕರು, ನಗರಸಭೆಯವರು, ಅಧಿಕಾರಿಗಳು ಈ ಕುರಿತು ತೀರ್ಮಾನ ಕೈಗೊಳ್ಳಬೇಕು. | ಕೆ.ಎಚ್. ಪ್ರಕಾಶ್ ಗೃಹರಕ್ಷಕ ದಳದ ಪ್ರಭಾರ ಘಟಕ ಅಧಿಕಾರಿ