

ಕುಶಾಲನಗರ:
ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ತಾಲೂಕಿನ ಕೂಡುಮಂಗಳೂರು(ಕೂಡ್ಲೂರು) ಸÀರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಶೌಚಗೃಹ ದಿನ-2024 ರ ಅಂಗವಾಗಿ "ನಮ್ಮ ಶೌಚಗೃಹ ನಮ್ಮ ಗೌರವ"ಎಂಬ ಧ್ಯೇಯದಡಿ ಗುರುವಾರ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲೆಯಲ್ಲಿ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಶೌಚಗೃಹ ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.
ಕೂಡ್ಲೂರು ಗ್ರಾಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಜಾಗೃತಿ ಜಾಥಾ ನಡೆಸಿ ಸ್ವಚ್ಛ ಶೌಚಗೃಹ ಬಳಕೆ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭ ಮಾತನಾಡಿದ ಟಿ.ಜಿ. ಪ್ರೇಮಕುಮಾರ್, ನಾವು ಪ್ರತಿನಿತ್ಯ ಬಳಸುವ ಶೌಚಗೃಹವನ್ನು ಹೇಗೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಮತ್ತು ಸಮುದಾಯದಲ್ಲಿ ಶೌಚಾಲಯ ಬಳಕೆಯ ಬಗೆ ಹೇಗೆ ಎನ್ನುವ ಮಾಹಿತಿ ನೀಡಿದರು.
"ನೈರ್ಮಲ್ಯದೆಡೆಗೆ ನಮ್ಮ ನಡಿಗೆ" ಎಂಬ ಘೋಷವಾಕ್ಯದ ಮೂಲಕ ನಾವು ಶೌಚಗೃಹದ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೆರ್ಮಲ್ಯ ಕಾಪಾಡುವ ದಿಸೆಯಲ್ಲಿ ಬಯಲು ಶೌಚಗೃಹದ ಬಳಕೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಣ ತೊಡಬೇಕು. ಈ ಬಾರಿ ನ. 19 ರಿಂದ ಡಿ. 10ರವರೆಗೆ "ನಮ್ಮ ಶೌಚಗೃಹ ನಮ್ಮ ಗೌರವ" ಎಂಬ ವಿಶೇಷ ಆಂದೋಲನದ ಅಂಗವಾಗಿ ಗ್ರಾಮೀಣ ಸಮುದಾಯದಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಗೃಹಗಳನ್ನು ನಿರಂತರ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿವರ್ಷ ನ.19 ರಂದು ವಿಶ್ವ ಶೌಚಗೃಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಶೌಚಗೃಹ ಸ್ವಚ್ಛತೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ವಿದ್ಯಾರ್ಥಿಗಳು ತಾವು ಬಳಸುವ ಶೌಚಗೃಹದ ಸ್ವಚ್ಛತೆ ಜತೆಗೆ ತಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ಜನಸಮುದಾಯದಲ್ಲಿ ಆರೋಗ್ಯ, ನೈರ್ಮಲ್ಯ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಅನ್ಸಿಲಾ ರೇಖಾ, ಕೆ.ಟಿ. ಸೌಮ್ಯ, ಸಿಬ್ಬಂದಿ ಎಂ.ಉಷಾ, ಶಾಲಾ ನಾಯಕಿ ಸ್ಪಂದನ, ಉಪ ನಾಯಕ ಎಂ. ಗೌತಮ್ ಹಾಗೂ ವಿದ್ಯಾರ್ಥಿಗಳು ಇದ್ದರು.