

ಅಥಣಿ ಗ್ರಾಮೀಣ: ಇಂದಿನ ವೈಜ್ಞಾನಿಕ ಯುಗದಲ್ಲಿ ಹಳ್ಳಿಗಳಲ್ಲಿ ಜರುಗುವ ಜಾತ್ರೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸಿ ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಶಿವರಾಯ ಮುತ್ಯಾ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಜತೆ ಜೀವನ ಅರ್ಥೈಸಿಕೊಳ್ಳುವಂತಹ ಸಂಸ್ಕೃತಿ ಕಲಿಸಬೇಕು ಎಂದರು.
ಕೌಲಗುಡ್ಡದ ಅಮರೇಶ್ವರ ಮಹಾರಾಜರು ಪ್ರವಚನ ನೀಡಿ, ಇತ್ತೀಚೆಗೆ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಟಿವಿ, ಸಿನಿಮಾ ವೀಕ್ಷಣೆ ಬದಲಾಗಿ ಧಾರ್ಮಿಕ ಕಾರ್ಯಕ್ರಗಳಲ್ಲಿ ಭಾಗವಹಿಸಿ ನೆಮ್ಮದಿ ಜೀವನ ಸಾಗಿಸಬೇಕು. ಹಲ್ಯಾಳ ಗ್ರಾಮದಲ್ಲಿ ಜಾತಿ, ಮತ ಎನ್ನದೇ ಎಲ್ಲರೂ ಒಗ್ಗೂಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಶಿವರಾಯ ಮುತ್ಯಾ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಅನ್ನ ಪ್ರಸಾದ ಜರುಗಿತು. ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ, ಗುಂಡು ಕುರಬರ, ರಾಯಪ್ಪ ಬಾಗಿ, ವಿಠ್ಠಲ ಮಲಾಬಾದಿ, ಚಂದ್ರಕಾಂತ ಬಾಗಿ, ಮುರಿಗೆಪ್ಪ ಕುರಬರ, ಕುಮಾರ ನಾಯಕ, ಸಿದ್ದಪ್ಪ ಲೋಕುರ, ದೀಪಕ ಮುರಗುಂಡಿ ಇತರರಿದ್ದರು.