ತೊಗರಿ ಬಿತ್ತಿದ ನಂದಾಪುರದವರಿಗೆ ಸಿಗುತ್ತ ಲಾಭ?

TRACROT
ಕನಕಗಿರಿ ಭಾಗದಲ್ಲಿ ಬೃಹತ್ ಟ್ರಾೃಕ್ಟರ್‌ಗಳಿಂದ ತೊಗರಿ ಬಿತ್ತನೆ ನಡೆಸಿರುವ ರೈತರು.
Published on

ವಿಜಯವಾಣಿ ವಿಶೇಷ ಕನಕಗಿರಿ
ಕಳೆದ ವರ್ಷದಿಂದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕುಷ್ಟಗಿ ತಾಲೂಕಿನ ನಂದಾಪುರದ ರೈತರು ಜಮೀನು ಗುತ್ತಿಗೆ ಪಡೆದು ಉತ್ತಮ ತೊಗರಿ ಬೆಳೆದು ಲಾಭಾಂಶ ಕಂಡಿದ್ದರು. ಆದರೆ, ಈ ಬಾರಿ ಮುಂಗಾರು ವೈಫಲ್ಯದಿಂದ ತಡವಾಗಿ ತೊಗರಿ ಬಿತ್ತಿದ್ದು, ಉತ್ತಮ ಫಸಲು ದೊರಕುವುದೇ ಎನ್ನುವ ಪ್ರಶ್ನೆ ಮೂಡಿದೆ.

ಬೆಳೆ ನಷ್ಟದಿಂದಾಗಿ ತಾಲೂಕಿನ ರೈತರು ಕೃಷಿಯಿಂದ ವಿಮುಕ್ತಿ ಪಡೆದಿದ್ದು, ಭೂಮಿ ಉಳುಮೆ ಮಾಡಲು ಬೇಸರಗೊಂಡಿದ್ದರು. ಪಟ್ಟಣ ಸೇರಿ ಸುತ್ತಲಿನ ತಿಪ್ಪನಾಳ, ಕಲಕೇರಿ, ನಿರ್ಲೂಟಿ, ಮಲ್ಲಿಗೆವಾಡ ಸೀಮಾದಲ್ಲಿನ ಇಂತಹ ಜಮೀನುಗಳನ್ನು ಹುಡುಕಿಕೊಂಡು ಕಳೆದ ವರ್ಷ ಕುಷ್ಟಗಿ ತಾಲೂಕಿನಿಂದ ಆಗಮಿಸಿದ್ದ ರೈತರು ಎಕರೆಗೆ 500 ರೂ.ನಿಂದ 3 ಸಾವಿರ ರೂ.ವರೆಗೆ ಗುತ್ತಿಗೆ ಪಡೆದು, 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿ ಉತ್ತಮ ಲಾಭಾಂಶ ಪಡೆದಿದ್ದರು.

ಈ ವರ್ಷವೂ ಹೆಚ್ಚಿನ ಲಾಭಾಂಶದ ನಿರೀಕ್ಷೆಯೊಂದಿಗೆ ಎರಡು ತಿಂಗಳ ಹಿಂದೆಯೇ ಭೂಮಿ ಹದಗೊಳಿಸಿದ್ದರು. ಆದರೆ, ಮುಂಗಾರು ಕೈ ಕೊಟ್ಟಿದ್ದು, ಇದೀಗ ಸ್ವಲ್ಪ ಮಳೆಯಾಗಿದ್ದರಿಂದ ತೊಗರಿ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಒಂದೂವರೆ ತಿಂಗಳ ಬೆಳೆಯಿದ್ದು, ಮುಂಬರುವ ದಿನಗಳಲ್ಲಿ ಮಳೆಯಾದರೆ ಮಾತ್ರ ಉತ್ತಮ ಫಸಲು ಬರಬಹುದೆಂಬ ನಿರೀಕ್ಷೆಯಿದೆ. ಚಳಿಗಾಲದಲ್ಲಿ ಯಥೇಚ್ಛವಾಗಿ ಹೂ ಬಿಡುವುದು ಕಷ್ಟ ಎನ್ನುವ ಮಾತುಗಳ ಕೇಳಿಬಂದಿವೆ.

ಈ ಬಾರಿ ಹೆಚ್ಚಿನ ಜನರ ದಾಂಗುಡಿ


ಕಳೆದ ವರ್ಷ ಎಕರೆಗೆ ಕನಿಷ್ಠ 3 ಕ್ವಿಂ.ನಷ್ಟು ತೊಗರಿ ಬೆಳೆದಿದ್ದು, ಉತ್ತಮ ಬೆಲೆ ದೊರಕಿತ್ತು. ಈ ಬಾರಿ ನಂದಾಪುರ ಸುತ್ತಲಿನ ರೈತರು ಈ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ಆಗಮಿಸಿದ್ದು, 1000 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಉಳುಮೆ ಕಾರ್ಯ ಭರದಿಂದ ನಡೆಸಿದ್ದಾರೆ.


ಔಷಧ ಸಿಂಪಡನೆಗೆೆ ಯಂತ್ರ ಬಳಕೆ

ಈ ಭಾಗದಲ್ಲಿ ಟ್ರಾೃಕ್ಟರ್ ಮೂಲಕ ಬಿತ್ತನೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ತೊಗರಿ ಬಿತ್ತನೆಗೆ ಹೆಸರುವಾಸಿಯಾದ ನಂದಾಪುರ ರೈತರು ಔಷಧ ಸಿಂಪಡನೆ, ಫಸಲು ಕಟಾವಿಗೂ ಯಂತ್ರಗಳನ್ನು ಬಳಸುವುದರ ಮೂಲಕ ಶ್ರಮವನ್ನು ಕಡಿಮೆ ಮಾಡಿದ್ದರು.

ಕಳೆದ ವರ್ಷ ಉತ್ತಮವಾಗಿ ಫಸಲು ಬಂದಿದ್ದರಿಂದ ಈ ಬಾರಿ ನಮ್ಮ ಭಾಗದ ರೈತರು ಆಗಮಿಸಿ ಭೂಮಿ ಗುತ್ತಿಗೆ ಪಡೆದಿದ್ದರು. ಆದರೆ, ಮುಂಗಾರು ವೈಫಲ್ಯದಿಂದ ಬಿತ್ತನೆ ತಡವಾಗಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಮಳೆ ಬರುವ ನಿರೀಕ್ಷೆಯಿದೆ. ಕಳೆದ ವರ್ಷದಂತೆ ಫಸಲು ಬಂದರೆ ಶ್ರಮಕ್ಕೆ ತಕ್ಕಂತೆ ಫಲ ಸಿಕ್ಕಂತಾಗುತ್ತದೆ.


ಭೀಮನಗೌಡ, ಈಶಪ್ಪ.
ನಂದಾಪುರದ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net