ಸರ್ಕಾರ ತೊಗರಿ ಬೆಳೆಗಾರರ ನೆರವಿಗೆ ಬರಲಿ

Togari Grower, Indi, Lack of Rain, Poor Seed, Extreme Weather, MLA Yashwantraya Gowda Patil, Legislative Assembly, Session, Vijayapur,
ಯಶವಂತರಾಯಗೌಡ ಪಾಟೀಲ
Published on

ಇಂಡಿ: ಜುಲೈ, ಸೆಪ್ಟೆಂಬರ್ ತಿಂಗಳಲ್ಲಿಯ ಮಳೆಯ ಕೊರತೆ, ಕಳಪೆ ಬೀಜ, ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆ ಹಾಳಾಗಿದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಸೋಮವಾರ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

ಪ್ರಸಕ್ತ ವರ್ಷದ ಮುಂಗಾರಿ ಹಂಗಾಮಿನಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಇಂಡಿ ಹಾಗೂ ವಿಜಯಪುರ ಜಿಲ್ಲೆಯ ರೈತರು ಮುಂಗಾರಿ ಹಂಗಾಮಿನ ಜಮೀನುಗಳಲ್ಲಿ ಶೇ.70 ರಷ್ಟು ಜಮೀನಿನಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,34,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಇಂಡಿ ತಾಲೂಕಿನಲ್ಲಿ 1,21,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಅಧಿವೇಶನದಲ್ಲಿ ಮಾಹಿತಿ ನೀಡಿದರು.

ಸರ್ಕಾರದ ಕೃಷಿ ಸಚಿವರು ಈ ಬಗ್ಗೆ ಉತ್ತರಿಸಿ, ವಿಜಯಪುರ ಜಿಲ್ಲೆಯಲ್ಲಿಯ ತೊಗರಿ ಬೆಳೆ ಹಾಳಾಗಿರುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಹವಾಮಾನ ವೈಪರೀತ್ಯ, ಕಳಪೆ ಬೀಜ, ಮಂಜು ಮುಂತಾದ ಕಾರಣಗಳಿಂದ ಬೆಳೆಯ ಇಳುವರಿ ಕಡಿಮೆಯಾಗಿದೆ. ವಿಜ್ಞಾನಿಗಳ ಸರ್ವೇ ಪ್ರಕಾರ ಶೇ.30 ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ವಿಜ್ಞಾನಿಗಳ ತಂಡವೂ ಜಿಲ್ಲೆಗೆ ಬಂದು ಸರ್ವೇ ಕಾರ್ಯ ನಡೆಸಿದೆ. ಈ ಬಗ್ಗೆ ಸಮಗ್ರ ವರದಿ ಪಡೆದು ಮಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದ್ದಾರೆ. ತೊಗರಿ ಬೆಳೆದ1,08,000 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇನ್ನುಳಿದ ರೈತರಿಗೂ ಪರಿಹಾರ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಲಾಗಿದೆ.

ಇಂಡಿ ತಾಲೂಕಿನ ಪಡನೂರ ಗ್ರಾಮದ ಬಳಿ ಭೀಮಾ ನದಿಗೆ ಮೇಲ್ಸೇತುವೆ ನಿರ್ಮಿಸಲು ಮಂಜೂರಾತಿ ನೀಡಬೇಕು, ಇಂಡಿ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಬೇಕು, ಲಿಂಬೆ ಅಭಿವೃದ್ಧಿ ಮಂಡಳಿಯ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ಹಲವಾರು ಕಾಮಗಾರಿಗಳ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆದಿದ್ದಾರೆ. ಇವುಗಳಿಗೆ ಸರ್ಕಾರ ಸ್ಪಂದಿಸಿ ಕ್ರಮ ಜರುಗಿಸಲು ಭರವಸೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net