

ಯಲಬುರ್ಗಾ: ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ದ್ವಿದಳ ಧಾನ್ಯವಾದ ತೊಗರಿ ಬೆಳೆಯಲು ರೈತರು ಮುಂದಾಗಬೇಕು ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಉಪನ್ಯಾಸಕ ರಾಘವೇಂದ್ರ ಎಲಿಗಾರ್ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ರೈತ ಸಂಪರ್ಕ ಕೇಂದ್ರದಿಂದ ರೈತ ಮುತ್ತಣ್ಣ ಸಜ್ಜನ್ ಜಮೀನಲ್ಲಿ ಸೋಮವಾರ ತೊಗರಿ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸುವ ಬಗ್ಗೆ ರೈತರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರೇವಂಕಲಕುಂಟಾ ಭಾಗದಲ್ಲಿ ತೊಗರಿ ಬೆಳೆಗಾರರು ಹೆಚ್ಚಿದ್ದಾರೆ. ತೊಗರಿ ಬೆಳೆಯ ಸಮಗ್ರ ಬೇಸಾಯ, ಅಧಿಕ ಇಳುವರಿ ಮತ್ತು ಕೀಟ ನಿರ್ವಹಣೆ ಬಗ್ಗೆ ರೈತರು ಅಧಿಕಾರಿಗಳ ಸಲಹೆ ಪಡೆದು ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ವಾಣಿಜ್ಯ ಬೆಳೆಯಾದ ತೊಗರಿ ಅಧಿಕ ಬೆಳೆಯಲು ರೈತರು ಮುಂದಾಗಬೇಕು ಎಂದರು. ರೈತರು ತೊಗರಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾಹಿತಿ ನೀಡಿದರು.
ಸಿಬ್ಬಂದಿ ದ್ಯಾಮನಗೌಡ ಕರಿಗೌಡ್ರ, ಪ್ರಶಾಂತ, ಕಿರಣಕುಮಾರ, ಮಾಬಳೇಶ, ರೈತರಾದ ನಾಗರಾಜ ಗೌಡ್ರ, ಮಂಜುನಾಥ, ರಾಜಾಸಾಬ್ ಶಕ್ಕೇರ್, ಬಸವರಾಜ ಸಜ್ಜನ್ ಇತರರಿದ್ದರು.