ತೊಗರಿ ಬೆಳೆಗೆ ಲದ್ದಿ ಹುಳು ಕಾಟ

6knk2
ಕನಕಗಿರಿ ತಾಲೂಕಿನ ಗೋಡಿನಾಳ ಸೀಮಾದಲ್ಲಿ ಬೆಳೆದ ತೊಗರಿ ಬೆಳೆಯಲ್ಲಿ ಲದ್ದಿ ಹುಳು ಕಾಣಿಸಿಕೊಂಡಿರುವುದು.
Published on

ಕನಕಗಿರಿ: ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಸಮೃದ್ಧವಾದ್ದರಿಂದ ತಾಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ಬಿತ್ತನೆಯಾಗಿರುವ ತೊಗರಿ ಬೆಳೆ ಹೂ-ಕಾಯಿ ಕಟ್ಟುವ ವೇಳೆ ಲದ್ದಿ ಹುಳುಗಳು ದಾಂಗುಡಿ ಇಟ್ಟಿದ್ದು. ರೈತರನ್ನು ಆತಂಕಕ್ಕೀಡು ಮಾಡಿವೆ.

ಮೂರ‌್ನಾಲ್ಕು ವರ್ಷಗಳ ಹಿಂದೆ ಪಟ್ಟಣಕ್ಕೆ ಬಂದ ಕುಷ್ಟಗಿ ತಾಲೂಕಿನ ರೈತರು, ಇಲ್ಲಿನ ಭೂಮಿಯಲ್ಲಿ ಆಧುನಿಕ ಪದ್ಧತಿಯಲ್ಲಿ ತೊಗರಿ ಬೆಳೆದು ಒಳ್ಳೆಯ ಲಾಭ ಪಡೆದಿದ್ದರು. ಇದನ್ನು ನೋಡಿದ ಸ್ಥಳೀಯ ರೈತರು ಸಹ ತೊಗರಿ ಬೆಳೆಯಲು ಮುಂದಾಗಿದ್ದು, ಇದರಿಂದ ಪಾಳುಬಿದ್ದ ಜಮೀನುಗಳಲ್ಲೂ ಈ ಬಾರಿ ತೊಗರಿ ಬೆಳೆ ರಾರಾಜಿಸುತ್ತಿವೆ. ಬೆಳೆಗಳು ಉತ್ತಮವಾಗಿವೆ. ಆದರೆ, ಕಳೆದ ಮುರ‌್ನಾಲ್ಕು ದಿನಗಳಿಂದ ಲದ್ದಿ ಹುಳು ಕಾಣಿಸಿಕೊಂಡಿದ್ದು, ಬೆಳಗಿನ ಜಾವ ಹಾಗೂ ಸಂಜೆ ಎಲೆ, ಹೂವು ತಿಂದು ಹಾಳು ಮಾಡುತ್ತಿವೆ.

ಬಿಸಿಲು ಬಂದಾಕ್ಷಣ ಎಲೆ ಕೆಳ ಭಾಗದಲ್ಲಿ ಅಡಗಿಕೊಳ್ಳುತ್ತಿರುವ ಲದ್ದಿ ಹುಳುಗಳು, ಕ್ರಿಮಿನಾಶಕ ಸಿಂಪಡಿಸಿದರೂ ನಾಶವಾಗುತ್ತಿಲ್ಲ. ದುಬಾರಿ ಬೆಲೆಯ ಔಷಧ ತಂದು ಕೈ ಸುಟ್ಟುಕೊಳ್ಳುವಂತಾಗಿದೆ ಎನ್ನುತ್ತಿದ್ದಾರೆ ರೈತರು. ಕೃಷಿ ಅಧಿಕಾರಿಗಳ ಸಲಹೆ ಪಡೆದು ಹುಳುವಿನ ನಿಯಂತ್ರಣಕ್ಕೆ ಮುಂದಾದರೂ ಕಾಟ ತಪ್ಪುತ್ತಿಲ್ಲ. ಕಳೆದ ವರ್ಷದಂತೆ ಈ ಬಾರಿಗೂ ಅನ್ನದಾತನಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿದೆ.

ಲದ್ದಿ ಹುಳುವಿನ ಕಾಟ ಹೆಚ್ಚಾಗಿದ್ದು, ತೊಗರಿ ಬೆಳೆ ಸರ್ವನಾಶ ಮಾಡುತ್ತಿವೆ. ಈಗಾಗಲೇ ಕೃಷಿ ಇಲಾಖೆಯಲ್ಲಿ ದೊರೆಯುವ ಕ್ರಿಮಿನಾಶಕ ಸಿಂಪಡಿಸಿದರೂ ನಿಯಂತ್ರಣವಾಗಿಲ್ಲ. ತಕ್ಷಣ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು.ಹನುಮಂತಪ್ಪ ಬಂಡ್ರಾಳ್ ರೈತ ಮುಖಂಡ

ಪ್ರತಿ ವರ್ಷ ಈ ಕೀಟ ಕಾಣಿಸಿಕೊಳ್ಳುತ್ತದೆ. ಇದಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ಹಾಗೂ ಖಾಸಗಿ ಅಂಗಡಿಗಳಲ್ಲಿ ಇಬಿ ಎನ್ನುವ ಕೀಟನಾಶಕ ದೊರೆಯುತ್ತದೆ. ಇದನ್ನು ಸಿಂಪಡಿಸಿದರೆ ಕೀಟ ನಿಯಂತ್ರಣಕ್ಕೆ ಬರುತ್ತದೆ.ಸಂತೋಷ ಪಟ್ಟದಕಲ್ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net