

ಸಿಂದಗಿ: ಜಿಲ್ಲೆಯ ರೈತರು ಬೆಳೆದ ತೊಗರಿ ಕೈಗೆಟುಕದೇ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಸ್ಪಂದಿಸಬೇಕಿರುವ ಸಚಿವರು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಪ್ರಶ್ನಿಸಿದರು.
ಸಿಂದಗಿ ಬಿಜೆಪಿ ಮಂಡಲದ ಸಹಯೋಗದಲ್ಲಿ ತೊಗರಿ ಬೆಳೆ ಹಾನಿಯ ಸೂಕ್ತ ಪರಿಹಾರಕ್ಕಾಗಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆಯಿಂದಲೇ ವಿತರಿಸಿದ ತೊಗರಿ ಬೀಜ ಕಳಪೆಯಾಗಿದೆ. ರೈತರು ಸರ್ಕಾರ ಹಾಗೂ ಕೃಷಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೂ ಸರ್ಕಾರ ಮತ್ತು ಜಿಲ್ಲೆಯ ಸಚಿವರು, ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸದೇ ತಾತ್ಸಾರ ಭಾವನೆ ತೋರುತ್ತಿದ್ದಾರೆ ಎಂದು ದೂರಿದರು.
ಇನ್ನೊಂದು ವಾರದಲ್ಲಿಯೇ ತೊಗರಿ ಕಟಾವಿಗೆ ಬಂದು ನಿಂತಿದೆ. ಜಿಲ್ಲೆಯಲ್ಲಿಯೇ ಇರುವ ಇಬ್ಬರು ಸಚಿವರು, ಶಾಸಕರು ಬೆಳೆ ಹಾನಿಗೆ ಸಂಬಂಧಿಸಿ ಅಧಿಕಾರಿಗಳ ಸಭೆಯನ್ನೂ ಕರೆದಿಲ್ಲ. ಹಾನಿಗೊಳಗಾದ ಜಮೀನುಗಳಿಗೂ, ಹಾನಿಗೀಡಾದ ರೈತರ ಬಳಿಯೂ ತೆರಳಿಲ್ಲ. ಇದು ಸರ್ಕಾರ ಮತ್ತು ಸ್ಥಳೀಯ ಸಚಿವರು, ಶಾಸಕರು ಎಲ್ಲಿದ್ದಾರೆ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಲ್ಲದೆ, ಸರ್ಕಾರದ ಮತ್ತು ಅವರ ರೈತ ವಿರೋಧಿ ನಿಲುವನ್ನು ತೋರುತ್ತದೆ ಎಂದು ಆರೋಪಿಸಿದರು.
ಸಿಂದಗಿ ಹಾಗೂ ಆಲಮೇಲ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 87000 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ದೇವರಹಿಪ್ಪರಗಿಯಲಲಿ 16000, ಸಿಂದಗಿಯಲ್ಲಿ 4520 ಹಾಗೂ ಆಲಮೇಲದಲ್ಲಿ 1528 ರೈತರು ತೊಗರಿ ಬೆಳೆಯ ವಿಮೆಯನ್ನು ಭರಿಸಿದ್ದಾರೆ. ಇವರೆಲ್ಲರ ಜತೆಗೂ ತೊಗರಿ ಬೆಳೆ ಬೆಳೆದ ಎಲ್ಲರಿಗೂ ಸೂಕ್ತ ಪರಿಹಾರ ಒದಗಿಸಬೇಕು. ಈ ಕೂಡಲೇ ಜಿಲ್ಲಾಧಿಕಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ, ಡ್ರೋನ್, ವಿಮಾನ ಸಮೀಕ್ಷೆಯ ಮೂಲಕ ಬೆಳೆ ಹಾನಿ ಗುರುತಿಸಬೇಕು ಎಂದು ಒತ್ತಾಯಿಸಿ ಕೃಷಿ ಸಚಿವರು, ಕಾರ್ಯದರ್ಶಿ ಹಾಗೂ ನಿರ್ದೇಶಕರೊಂದಿಗೆ ಜೆಡಿ ಅವರಿಗೂ ಪತ್ರ ಬರೆದಿರುವೆ. ಇನ್ನೂ ಅವರಿಂದ ಉತ್ತರ ಬಂದಿಲ್ಲ ಎಂದರು.
ರೈತರ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಸಿಂದಗಿಯ ಸಹಾಯಕ ಕೃಷಿ ಅಧಿಕಾರಿಗಳ ಕಚೇರಿ ಎದುರು ಧರಣಿ ಮುಂದುವರಿಸಲಾಗುವುದು ಎಂದರು.
ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಇತರರು ಮಾತನಾಡಿದರು. ನೂರಾರು ರೈತರು ತಮ್ಮ ಎತ್ತಿನ ಗಾಡಿಗಳೊಂದಿಗೆ ಬೃಹತ್ ಹೋರಾಟದಲ್ಲಿ ಪಾಲ್ಗೊಂಡಿದ್ದರು.