

ಹರೀಶ್ ಮೋಟುಕಾನ
ಮಂಗಳೂರು: ಶೇಂದಿ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಬಾರ್ ಸ್ವರೂಪಕ್ಕೆ ತೆರೆದುಕೊಳ್ಳುತ್ತಿವೆ. ತಲಪಾಡಿ ಹಾಗೂ ಕೂಳೂರಿನಲ್ಲಿ ಶೇಂದಿ (ಕಲಿ) ಬಾರ್ ಆರಂಭಗೊಂಡಿದ್ದು, ಪರವಾನಗಿ ಸಿಗುತ್ತಿದ್ದಂತೆ ಇನ್ನೂ ಮೂರ್ನಾಲ್ಕು ತೆರೆಯಲಿವೆ.
ಶೀಟು, ಟರ್ಪಾಲು ಹಾಕಿದ ಮಾಡು, ತಟ್ಟಿಯ ಗೋಡೆಯ ಹಳೇ ಕಟ್ಟಡದ ಶೇಂದಿ ಅಂಗಡಿಗೆ ಈಗಿನ ತಲೆಮಾರಿನ ಜನ ಹೋಗಲು ಇಷ್ಟಪಡುವುದಿಲ್ಲ. ಯುವಜನರನ್ನು ಸೆಳೆಯಲು ಬಾರ್‌ನಂತೆ ಕಟ್ಟಡ ವಿನ್ಯಾಸಗೊಳಿಸಿ, ಅಲ್ಲಿ ಶೇಂದಿ ಜತೆಗೆ ಮೀನು, ಕೋಳಿ ಖಾದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬಾಟಲಿ ಬದಲು ಪಾರದರ್ಶಕ ಜಗ್‌ನಲ್ಲಿ ಶೇಂದಿ ಹಾಕಿ ಗ್ಲಾಸ್ ಸಹಿತ ನೀಡಲಾಗುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಉಡುಪಿ ಜಿಲ್ಲೆಯ ಮಲ್ಪೆ, ಕೆಮ್ಮಣ್ಣು ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆಯೇ ಇಂಥ ಹೈಟೆಕ್ ಸ್ಪರ್ಶದ ‘ಟಾಡಿ ಶಾಪ್’ಗಳು ಆರಂಭವಾಗಿದ್ದವು. ಆದರೆ ಕರೊನಾ ಲಾಕ್‌ಡೌನ್ ಬಳಿಕ ವಹಿವಾಟು ಕ್ಷೀಣಗೊಂಡಿದೆ.
ಯುವ ಜನರಿಗೆ ಉದ್ಯೋಗ: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಕರೊನಾ ಕಾಲಘಟ್ಟದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಹೊತ್ತಿನಲ್ಲಿ ಸಮಾನ ಮನಸ್ಕರು ಸೇರಿ ಶೇಂದಿ ಬಾರ್ ಆರಂಭಿಸುತ್ತಿದ್ದು, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬೆಂಬಲ ನೀಡುತ್ತಿದೆ. ಪ್ರಸ್ತುತ ಶೇಂದಿ ಅಂಗಡಿ ಅಥವಾ ಬಾರ್ ತೆರೆಯಲು ತಹಸೀಲ್ದಾರ್ ಪರವಾನಗಿ ನೀಡುವ ಅಧಿಕಾರ ಹೊಂದಿದ್ದಾರೆ.
ಎರಡು ಜಿಲ್ಲೆಗಳಲ್ಲಿ 440 ಅಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 260 ಶೇಂದಿ ಅಂಗಡಿಗಳಿದ್ದು, 1600 ಮೂರ್ತೆದಾರರಿದ್ದಾರೆ. 22 ಮೂರ್ತೆದಾರರ ಸೊಸೈಟಿಗಳಿದ್ದು, 13 ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿವೆ. ಮೂರ್ತೆದಾರರಿಗೆ ದಿನಕ್ಕೆ 1,500ರಿಂದ 2 ಸಾವಿರ ರೂ. ತನಕ ಆದಾಯವಿದೆ. ಉಡುಪಿ ಜಿಲ್ಲೆಯಲ್ಲಿ 180ರಷ್ಟು ಶೇಂದಿ ಅಂಗಡಿಗಳಿವೆ. ಮೂರ್ತೆದಾರರ ಸಂಘಗಳಲ್ಲಿ 1800 ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 16 ಸೊಸೈಟಿಗಳಿದ್ದು, 10 ಬ್ಯಾಂಕಿಂಗ್ ಚಟುವಟಿಕೆ ನಡೆಸುತ್ತಿವೆ.
ಹೊಸ ತಲೆಮಾರಿಗೆ ಪೂರಕವಾಗುವ ರೀತಿ ಶೇಂದಿ ಅಂಗಡಿ ಸ್ಥಾಪನೆಗೆ ಮೂರ್ತೆದಾರರ ಮಹಾಮಂಡಲ ಉದ್ದೇಶಿಸಿದೆ. ಮಂಗಳೂರು ತಾಲೂಕಿನಲ್ಲಿ 10 ಹಾಗೂ ಉಳಿದ ತಾಲೂಕುಗಳಲ್ಲಿ ತಲಾ 5 ಶೇಂದಿ ಬಾರ್ ಸ್ಥಾಪನೆಗೆ ಅವಕಾಶವಿದೆ. ಯುವಜನರು ಈ ಕಡೆಗೆ ಆಸಕ್ತರಾಗಬೇಕು. - ಶಿವಪ್ಪ ಸುವರ್ಣ, ಉಪಾಧ್ಯಕ್ಷ, ದ.ಕ. ಮೂರ್ತೆದಾರರ ಮಹಾಮಂಡಲ ಮೂರ್ತೆದಾರಿಕೆ ವೃತ್ತಿಯನ್ನು ಕೀಳರಿಮೆ ದೃಷ್ಟಿಯಿಂದ ನೋಡಲಾಗುತ್ತಿದೆ. ಬಹುತೇಕ ಮಂದಿ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ನಮ್ಮಲ್ಲಿ ಸಾಕಷ್ಟು ಮಂದಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಲ್ಲಿವರೆಗೆ ಸರ್ಕಾರ ನಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. - ಕೊರಗ ಪೂಜಾರಿ, ಅಧ್ಯಕ್ಷ, ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ https://www.vijayavani.net/shirva-woman-arrested-by-kuwait-police/