ಇಂದಿನ ಯುವಕರಿಗೆ ಮಾರ್ಗದರ್ಶನ ಅವಶ್ಯಕ : ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಸಲಹೆ

IMG-20220918-WA0020
ವಿಜಯಪುರ ನಗರದ ಚೇತನಾ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಯುವ ಬ್ರಿಗೇಡ್‌ನ ಜಿಲ್ಲಾ ಬೈಠಕ್ ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಪ್ರವಚನಕಾರ ಬಾಬುರಾವ್ ಮಹಾರಾಜ್, ವರ್ಧಮಾನ ತ್ಯಾಗಿ ಮತ್ತಿತರರಿದ್ದರು.
Published on

ವಿಜಯಪುರ : ಇಂದಿನ ಯುವಕರಿಗೆ ಮಾರ್ಗದರ್ಶನ ಅತಿಅವಶ್ಯಕವಾಗಿದೆ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಚೇತನಾ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಯುವ ಬ್ರಿಗೇಡ್‌ನ ಜಿಲ್ಲಾ ಬೈಠಕ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾರಿಯಲ್ಲಿ ಬಿದ್ದವರನ್ನು ನೋಡಿ ಜನ ಬೈಯುತ್ತಾರೆ ವಿನಹ ಪಕ್ಕದಲ್ಲಿ ಎತ್ತಿ ಇಡುವ ಪ್ರಯತ್ನ ಯಾರೂ ಮಾಡುವುದಿಲ್ಲ. ಕಣ್ಣಿದ್ದವರು ಕಲ್ಲಿಗೆ ಬೈಯುತ್ತಾರೆ, ಕಣ್ಣು ಕಾಣದ ಕುರುಡನೊಬ್ಬನ ಕಾಲಿಗೆ ತಾಕಿದಾಗ ಅವನು ಅದನ್ನು ಪಕ್ಕದಲ್ಲಿ ಸರಿಸುತ್ತಾನೆ. ಕಣ್ಣಿಲ್ಲದ ವ್ಯಕ್ತಿಯ ಹೃದಯ ಶ್ರೀಮಂತಿಕೆ ಎಲ್ಲರಿಗೂ ಬರಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಪ್ರವಚನಕಾರ ಬಾಬುರಾವ್ ಮಹಾರಾಜ್, ಸ್ವಾಮಿ ವಿವೇಕಾನಂದರು ರಾಷ್ಟ್ರದ ಅಮೂಲ್ಯ ಕೊಡುಗೆಯಾಗಿದ್ದಾರೆ. ಸ್ವಯಂ ಪ್ರೇರಿತರಾಗಿ ದೇಶದ ಸೇವೆ ಮಾಡಿದರೆ ಅದು ಜನಾರ್ದನ ಸೇವೆ ಮಾಡಿದಂತೆ. ಒಂದು ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡ ಅಜ್ಜಿ ಬಾಯಾರಿಕೆ ಆಗಿ ನೀರು ನೀರೆಂದು ಹಪಹಪಿಸುತ್ತಿದ್ದಳು. ಯಾರೂ ಅವಳತ್ತ ನೋಡಿ ನೋಡಿದಂತೆ ಹೋದರು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಧ್ಯಯನ ಮಾಡಿದ ಒಬ್ಬ ಯುವಕ ಓಡಿ ಹೋಗಿ ನೀರು ತಂದು ಕೊಟ್ಟನು. ಎಷ್ಟೊತ್ತಿನವರೆಗೆ ನಾನು ನೀರಡಿಕೆಯಿಂದ ಕೂಗಿದರು ಯಾರೂ ಬರಲಿಲ್ಲ, ನೀನು ನನ್ನ ಧ್ವನಿ ಕೇಳಿ ನೀರು ತಂದು ಕೊಟ್ಟು ನನ್ನ ದಾಹ ತಣಿಸಿದೆ, ಮುಂದೊಂದು ದಿನ ನಿನ್ನ ಧ್ವನಿಯನ್ನು ಇಡೀ ವಿಶ್ವವೇ ಕೇಳಲಿ ಎಂದು ಹಾರೈಸಿದಳು. ಇದುವೇ ಯುವ ಶಕ್ತಿಯ ಸ್ಫ್ಪೂರ್ತಿಯ ಚಿಲುಮೆಯಾದ ಸ್ವಾಮಿ ವಿವೇಕಾನಂದರ ತತ್ವಾದರ್ಶದ ಪ್ರಭಾವವಾಗಿದೆ. ದೇಶದ ಎಲ್ಲ ಯುವ ಮನಸ್ಸುಗಳು ಈ ರೀತಿ ಪರಿವರ್ತನೆಗೊಂಡರೆ ನಮ್ಮ ಭಾರತ ದೇಶ ವಿಶ್ವಕ್ಕೆ ಮಾದರಿ ಎಂದು ಹೇಳಿದರು.

ಯುವ ಬ್ರಿಗೇಡ್‌ನ ಉತ್ತರ ಭಾಗದ ರಾಜ್ಯ ಸಂಚಾಲಕರ ವರ್ಧಮಾನ ತ್ಯಾಗಿ ಮಾತನಾಡಿದರು. ಸಭೆಯಲ್ಲಿ ಹೊನವಾಡ ಗ್ರಾಮದ ಯುವ ಬ್ರಿಗೇಡ್‌ನ ಯುವಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net