ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ: ಮುಖ್ಯಮಂತ್ರಿ ಚಂದ್ರು

mukhayamanthiri chandru
Published on

ಮಡಿಕೇರಿ: ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ, ವಿಕೇಂದ್ರೀಕರಣ ರಾಜಕಾರಣ ಮರೆಯಾಗಿದ್ದು, ಸರ್ವಾಧಿಕಾರ ಮೆರೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ಸಂವಿಧಾನಕ್ಕೆ ಪೂರಕವಾದ ರಾಜಕಾರಣ ನಡೆಯುತ್ತಿಲ್ಲ. ಸಮಬಾಳಿನ ಪರಿಕಲ್ಪನೆ ಸಾಕಾರಗೊಳ್ಳುತ್ತಿಲ್ಲ, ಅಧಿಕಾರ ವಿಕೇಂದ್ರೀಕರಣವಾಗುತ್ತಿಲ್ಲ. ಸಮಾಜ ಭ್ರಷ್ಟಾಚಾರ ಮುಕ್ತವಾಗುತ್ತಿಲ್ಲ, ಮತಚಲಾವಣೆಗೂ ಮತದಾರ ಹಣ ಪಡೆಯುವ ರೀತಿಯಲ್ಲಿ ಭ್ರಷ್ಟ ವ್ಯವಸ್ಥೆ ಬೆಳೆದು ಬಿಟ್ಟಿದೆ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ, ಸರ್ವಾಧಿಕಾರದ ರಾಜಕೀಯ ನಡೆಯುತ್ತಿದೆ. ಸದನದಲ್ಲಿ ವೈಯುಕ್ತಿಕ ನಿಂದನೆಯಾಗುತ್ತಿದೆ, ಹಲ್ಲೆ ಪ್ರಕರಣಗಳು ನಡೆಯುತ್ತಿದೆ ಎಂದರು.

ಇಂದಿನ ಶಿಕ್ಷಣ ವ್ಯವಸ್ಥೆ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ ೬೦ ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಸ್ವತ: ಶಿಕ್ಷಣ ಸಚಿವರೇ ಹೇಳುತ್ತಿದ್ದಾರೆ. ಈ ನಡುವೆ ಕನ್ನಡ ಶಾಲೆಯ ಉದ್ಧಾರ, ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡುತ್ತಿದ್ದಾರೆ. ಸಂಸದರು, ಶಾಸಕರ ನೇತೃತ್ವದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.

ವಿವಿಧೆಡೆ ಅಸ್ತಿತ್ವವನ್ನು ಕಳೆದುಕೊಂಡು ಹತಾಶಗೊಂಡಿರುವ ಕೇಂದ್ರ ಸರಕಾರ ಆಮ್ ಆದ್ಮಿ ಪಾರ್ಟಿಯ ಪ್ರಗತಿಯನ್ನು ಸಹಿಸದೆ ಕೇಜ್ರಿವಾಲ್ ಸೇರಿದಂತೆ ಸುಮಾರು ೧೨ಮಂದಿಯನ್ನು ಬಂಧಿಸಿ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿತು. ಆದರೆ, ನ್ಯಾಯಾಲಯ ಕೇಂದ್ರಕ್ಕೆ ಛೀಮಾರಿ ಹಾಕಿ ಎಲ್ಲರನ್ನು ಬಿಡುಗಡೆಗೊಳಿಸಿದೆ ಎಂದು ಆರೋಪಿಸಿದರು.

ಉಚಿತ ಸೌಲಭ್ಯಗಳನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ ಎಂದು ಹೇಳಿದವರಿದ್ದಾರೆ. ಆದರೆ, ಎಲ್ಲಾ ಸೌಲಭ್ಯಗಳನ್ನು ನೀಡಿದರೂ ದೆಹಲಿ ಅಭಿವೃದ್ಧಿ ಪಥದಲ್ಲಿದೆ. ದೆಹಲಿ ಸರ್ಕಾರವನ್ನು ಇತರ ರಾಜ್ಯಗಳ ರಾಜಕೀಯ ಪಕ್ಷಗಳು ಕಾಪಿ ಮಾಡಿ ಉಚಿತ ಸೌಲಭ್ಯಗಳನ್ನು ಚುನಾವಣೆ ಸಂದರ್ಭ ಘೋಷಿಸಿವೆಯಾದರೂ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗುತ್ತಿವೆ ಎಂದು ಟೀಕಿಸಿದರು.

ದೆಹಲಿಯಂತೆ ಎಲ್ಲಾ ರಾಜ್ಯಗಳಲ್ಲೂ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಪರ ಆಡಳಿತ ನಡೆಸಬೇಕೆನ್ನುವ ಗುರಿ ಆಮ್ ಆದ್ಮಿ ಪಾರ್ಟಿಗಿದೆ. ಆದರೆ, ನಮ್ಮದು ಹಣವಿಲ್ಲದ ಜನಸಾಮಾನ್ಯರ ಪಕ್ಷವಾಗಿರುವುದರಿಂದ ಸಂಘಟನೆ ವಿಳಂಬವಾಗುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಜನಜಾಗೃತಿಯ ಮೂಲಕ ಪಕ್ಷವನ್ನು ಬೆಳೆಸಿ ಸಾಮಾನ್ಯ ವ್ಯಕ್ತಿ ಕೂಡ ಶಾಸಕನಾಗಬಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಭೋಜಣ್ಣ ಸೋಮಯ್ಯ, ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಹಾಗೂ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ ಉಪಸ್ಥಿತರಿದ್ದರು.

ಕೊಡಗಿಗೆ ಪ್ರತ್ಯೇಕ ಕ್ಷೇತ್ರ

ಕೊಡಗು ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಇದೊಂದು ವಿಭಿನ್ನ ಭೌಗೋಳಿಕ ರಚನೆಯ ಜಿಲ್ಲೆಯಾಗಿರುವುದರಿಂದ ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಅಗತ್ಯವಿದೆ. ಕೇವಲ ಎರಡು ಕ್ಷೇತ್ರಗಳಾದರೆ ಶಾಸಕರಾದವರಿಗೆ ನಿರ್ವಹಣೆ ಕಷ್ಟವಾಗಲಿದೆ ಮತ್ತು ಅನುದಾನದ ಕೊರತೆಯಾಗಲಿದೆ. ಲೋಕಸಭಾ ಕ್ಷೇತ್ರ ಕೂಡ ಹಿಂದೆ ಕೊಡಗು ಮಂಗಳೂರಿನೊಂದಿಗೆ ಹಂಚಿಕೊಂಡು ಇದೀಗ ಮೈಸೂರಿನೊಂದಿಗಿದೆ. ಕೊಡಗು ಜಿಲ್ಲೆಗೇ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಜಮೀನಿನ ಸಮಸ್ಯೆ ಮುಂದುವರೆದಿದೆ. ಅರಣ್ಯ ಮತ್ತು ಕೃಷಿಭೂಮಿಯ ರಕ್ಷಣೆಗಾಗಿ ಕೊಡಗಿಗೆ ಸೀಮಿತವಾಗಿ ವಿಶೇಷ ಅರಣ್ಯ ನೀತಿಯನ್ನು ಜಾರಿಗೆ ತರಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲೂ ಆಮ್ ಆದ್ಮಿ ಪಾರ್ಟಿಯನ್ನು ಜನಜಾಗೃತಿಯ ಮೂಲಕವೇ ಬೆಳೆಸಲಾಗುವುದು. ಆ ಮೂಲಕ ಕೃಷಿಕರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಲಾಗುವುದು ಎಂದರು.

ಜಿ.ಪಂ, ತಾ.ಪಂ ಚುನಾವಣೆ

ಕಳೆದ ನಾಲ್ಕು ವರ್ಷಗಳಿಂದ ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಸದೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಕಡೆಗಣಿಸಿದೆ. ಚುನಾವಣೆಯನ್ನು ಶೀಘ್ರ ನಡೆಸದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net