ಈಗಿನ ಪಿಎಚ್.ಡಿಗಳು ಸಂತೆಗಾಗಿ ನೇಯ್ದ ಸೀರೆಯಂತೆ

mysore
Published on

ಮೈಸೂರು: ಈಗಿನ ಪಿಎಚ್.ಡಿ ಸಂಶೋಧನೆಗಳು ಸಂತೆಗಾಗಿ ನೇಯ್ದ ಸೀರೆಯಂತಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಕಳವಳ ವ್ಯಕ್ತಪಡಿಸಿದರು.


ಮೈವಿವಿ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ 2024-25ನೇ ಸಾಲಿನ ಸಂಶೋಧನಾ ವಿದ್ಯಾರ್ಥಿ ವೇದಿಕೆ ‘ಅರಿವು’ ಉದ್ಘಾಟನೆ, ಬ್ಲಾಗ್ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬುಡವಿಲ್ಲದ ಸಂಶೋಧನೆಗಳನ್ನು ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬಂತೆ ಮಾಡಲಾಗುತ್ತಿದೆ. ಇದರಿಂದ ಫಲವಂತಿಕೆ ಸಿಗಲ್ಲ. ಸ್ನಾತಕ ಪದವಿ ಬಳಿಕ ಯಾವುದೇ ಸಿದ್ಧತೆ ಇಲ್ಲದೆ ಸಂಶೋಧನೆ ಮಾಡುವುದು ತಪ್ಪು. ಹೀಗೆ ಮಾಡಿದರೆ ವಿದ್ಯಾರ್ಥಿಗಳ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಂತಾಗಲಿದೆ. ಜತೆಗೆ, ಪಿಎಚ್.ಡಿ ಸಂಶೋಧನೆ ಎಲ್ ಬೋರ್ಡ್(ಕಲಿಕಾ ಹಂತ ವಾಹನ ಚಾಲನೆ) ವಾಹನದಂತಾಗಲಿದೆ ಎಂದರು.


ಪಿಯುಸಿ ಅಥವಾ ಸ್ನಾತಕ ಪದವಿ ಹಂತದಲ್ಲೇ ಸಂಶೋಧನಾ ವಿಧಿವಿಧಾನ, ಪ್ರಬಂಧ ರಚನೆ ಕಲಿಸುವ ಕುರಿತು ಪಠ್ಯಕ್ರಮ ರೂಪಿಸಬೇಕು. ಆಗ ಸ್ನಾತಕೋತ್ತರ ಪದವಿಯಲ್ಲಿ ಮೂಲ ಸಂಶೋಧನೆಗೆ ಅವಕಾಶ ದೊರೆಯುತ್ತದೆ ಎಂದು ಸಲಹೆ ನೀಡಿದರು.


ಸಂಶೋಧನಾ ಮಹಾಪ್ರಬಂಧವು ಬರೀ ಗ್ರಂಥಾಲಯದ ಕೃತಿಯಾಗಬಾರದು. ಅದು ಜನಸಾಮಾನ್ಯರ ಕೈಗನ್ನಡಿಯಾಗಬೇಕು. ಆಗಲೇ ಅದು ಸಮಾಜಮುಖಿಯಾಗಲು ಸಾಧ್ಯ. ಜತೆಗೆ, ಸಮಾಜದ ಪ್ರಯೋಜನ, ಉಪಯೋಗಕ್ಕೂ ಬರಬೇಕು. ಅಧ್ಯಯನ ರೂಪದಲ್ಲಿ ಸಲಹೆಯೊಂದಿಗೆ ಸಾಮಾಜಿಕ ಬದಲಾವಣೆಗೂ ಪ್ರೇರಕವಾಗಬೇಕು. ಆಗ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳು ನಡೆಯುತ್ತವೆ. ಆಗಲೇ ಅದಕ್ಕೆ ಸಾರ್ಥಕತೆ ಬರುತ್ತದೆ ಎಂದರು.


ಸಮಾಜದ ಆಗುಹೋಗುಗಳಿಗೆ ಸಂಶೋಧನೆಗಳು ಪ್ರತಿಕ್ರಿಯಿಸುವ, ಸಂವಹನಿಸುವ, ಕಸಿ ಕಟ್ಟುವ ಕೆಲಸ ಮಾಡಬೇಕು. ಇಲ್ಲವಾದರೆ, ಅದು ಅಪ್ರಸ್ತುತವಾಗಿ ಗ್ರಂಥಾಲಯಕ್ಕೆ ಮಾತ್ರ ಯೋಗ್ಯವಾಗುತ್ತದೆ. ಜನಸಾಮಾನ್ಯರು ಓದಲು ಅದು ಸೂಕ್ತ ಎನಿಸಿಕೊಳ್ಳಲ್ಲ ಎಂದರು.
ಸಮಾಜದ ವಿಷಯಗಳು ಸಂಶೋಧನೆಯಲ್ಲಿ ಸೇರಿಕೊಳ್ಳಬೇಕಿದೆ. ಇದು ಸಂಶೋಧನೆಯ ಗಟ್ಟಿತನವನ್ನು ವೃದ್ಧಿಸುತ್ತದೆ. ಇಲ್ಲವಾದರೆ ಅದು ಕಸವೇ ಹೊರತು ಸಂಶೋಧನೆ ಆಗಲ್ಲ ಎಂದರು.


ಸಂಶೋಧನೆಯಲ್ಲಿ ಸಿದ್ಧ ಮಾದರಿ ಇರುವುದಿಲ್ಲ. ವಿಷಯದ ಅಳಕ್ಕೆ ಇಳಿದಷ್ಟೂ ಹೊಸ ಮಾದರಿಗಳು ಹುಟ್ಟಿಕೊಳ್ಳುತ್ತವೆ. ಸ್ವಮಾನದಂಡಗಳನ್ನು ಯಾರೂ ಕಂಡುಕೊಳ್ಳುತ್ತಾರೋ ಅವರು ಮೂಲಭೂತವಾಗಿ ಉತ್ಕೃಷ್ಟ ಸಂಶೋಧಕರಾಗಿ ಹೊರಹೊಮ್ಮುತ್ತಾರೆ. ಸಾಂದರ್ಭಿಕ ಸಂಶೋಧನೆಗಳು ಉತ್ತಮ. ನಿರ್ದಿಷ್ಟ ಸಂಶೋಧನೆ ಅನ್ನುವುದು ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಜತೆಗೆ ಪೂರ್ವಾಗ್ರಹವಾಗಿ ಸಂಶೋಧನೆ ಕೈಗೊಳ್ಳಬಾರದು. ಜಾತಿ ಬಿಟ್ಟು ಸಂಶೋಧಕರಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಅಧ್ಯಯನವೇ ಸಂಶೋಧನೆ ಅಲ್ಲ. ವಿಮರ್ಶೆ, ವಿಶ್ಲೇಷಣೆ, ಅಧ್ಯಯನವೆಲ್ಲ ಸಂಶೋಧನೆಯ ಅಂಗಗಳು. ಸಂಶೋಧನೆ ಎನ್ನುವುದು ಒಂದು ಹೊಳಹು ಅಷ್ಟೆ. ಈ ಹೊಳಹುಗಳ ಬೆನ್ನತ್ತಿ ಶೋಧ ಮಾಡಬೇಕಿದೆ ಎಂದರು.


ಡಿಜಿಟಲ್ ಮಾಧ್ಯಮ ಎಷ್ಟೇ ಎತ್ತರಕ್ಕೆ ಬೆಳೆದರೂ, ಮುದ್ರಣ ಮಾಧ್ಯಮಕ್ಕೆ ತನ್ನದೆ ಆದ ಶಕ್ತಿ ಇದೆ. ಮುದ್ರಣದ ಮಾಧ್ಯಮ ಕುರಿತು ಆತಂಕ ಬೇಕಿಲ್ಲ. ಹೀಗಾಗಿ ಕಟ್ಟುವ ವಿಚಾರ ಕಸಿಯಿಂದ ಮಾತ್ರ ಬ್ಲಾಗ್ ಮತ್ತು ವೇದಿಕೆಗೆ ಜೀವಬರುತ್ತದೆ. ಇಂದು ಉದ್ಘಾಟನೆಗೊಂಡ ಬ್ಲಾಗ್ ಸಹ ಕೇವಲ ಅಧ್ಯಯನ ಸಂಸ್ಥೆಗೆ ಸೀಮಿತವಾಗದೆ ರಾಜ್ಯಕ್ಕೆ ವಿಸ್ತಾರಗೊಳ್ಳಬೇಕು. ನಿತ್ಯ ಚಟುವಟಿಕೆಯಿಂದ ಕೂಡಿರಬೇಕು. ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು ಎಂದರು.


ವಿವಿಯಲ್ಲಿ ಏನೇ ವಿಷಯಗಳು ಇದ್ದರೇ ಬ್ಲಾಗ್‌ನಲ್ಲಿ ಚರ್ಚೆಗೆ ಒಳಪಡಿಸಿ. ವಿಚಾರದಲ್ಲಿ ಮಡಿವಂತಿಕೆ ಬೇಡ. ಯಾವುದೇ ಭಾಷೆಗಳಿಗೆ ಸಂಬಂಧಿಸಿದಂತೆ ವಿಷಯಗಳನ್ನು ಬ್ಲಾಗ್‌ನಲ್ಲಿ ಹಂಚಿಕೊಳ್ಳಿ. ಇದರಿಂದ ಜ್ಞಾನ ವಿಸ್ತಾರವಾಗುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಜಾನಪದ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಾಧ್ಯಾಪಕಿ ಎಸ್.ಡಿ.ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net