

ಇಂದಿನ ಪೀಳಿಗೆಗೆ ನಮ್ಮ ಪರಂಪರೆಯ ಬೇರಿನ ಪರಿಚಯವೇ ಇಲ್ಲದಾಗಿದೆ. ಏನೇ ಸಂಪತ್ತು ಇದ್ದರೂ ಪರಂಪರೆಯ ಅರಿವು ಇಲ್ಲದಿದ್ದರೆ ಇವೆಲ್ಲವೂ ವ್ಯರ್ಥ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಪರಂಪರೆಯನ್ನು ವಂಚಿಸಿ ಏನನ್ನೂ ಕಟ್ಟಲಾಗದು. ನಿಸರ್ಗದಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿರುತ್ತದೆ. ಅದನ್ನು ಮನುಷ್ಯ ಕಲೆ, ಸಾಹಿತ್ಯದ ಮೂಲಕ ಅಭಿವ್ಯಕ್ತಿಸುತ್ತಾನೆ. ನಮ್ಮ ಸಂಗೀತ, ಕಲೆ, ಸಾಹಿತ್ಯ, ಪರಂಪರೆ ಗಗನದ ವ್ಯಾಪ್ತಿಗಿಂತ ದೊಡ್ಡದು. ಕಾಡು-ಮೇಡು, ವನ್ಯಜೀವಿಗಳು ಇರುವವರೆಗೂ ಮಾತ್ರ ಈ ಭೂಮಿ ಮನುಷ್ಯನಿಗೆ ಆಶ್ರಯ ನೀಡಬಲ್ಲದು. ಹಾಗಾಗಿ, ಈ ಬಗ್ಗೆ ನಾವೆಲ್ಲರೂ ಭಾವನಾತ್ಮಕವಾಗಿ ಅವಲೋಕಿಸುವ ಅಗತ್ಯವಿದೆ ಎಂದು ನುಡಿದರು.
ನಿಸರ್ಗದ ಜತೆಗೆ ನಮ್ಮ ಪೂರ್ವಜರು ಬದುಕನ್ನು ಏಕೀಕೃತಗೊಳಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗವನ್ನು ಹಾಳು ಮಾಡಲಾಗುತ್ತಿದೆ. ನಿಸರ್ಗದಿಂದ ಮನುಷ್ಯರಿಗೆ ಸಾಕಷ್ಟು ಉಪಯೋಗವಿದೆ. ಅದನ್ನು ಅರಿತು ನಾವು ಕೂಡ ನಮ್ಮ ಪೂರ್ವಜರಂತೆ ಏಕೀಕೃತಗೊಂಡು ಪ್ರಕೃತಿಯೊಡನೆ ಸಾಗಿದರೆ ಮಾತ್ರ ಕಲೆ, ಸಾಹಿತ್ಯ ಎಲ್ಲವನ್ನು ಅನುಭವಿಸುತ್ತೇವೆ. ಇವೆಲ್ಲವನ್ನು ಕಡೆಗಣಿಸಿದರೆ ಮನುಷ್ಯರಿಗೆ ಹೆಚ್ಚು ಅಪಾಯ ಎಂದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತೆ, ಹಾಕಿ ಪಟು ನಿಲನ್ ಪೂಣಚ್ಚ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜ್ಞಾನವು ಕೂಡ ಹೆಚ್ಚಾಗಲಿದೆ. ನಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಎಂ.ಪಿ.ರಾಜೇಶ್ವರಿ, ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಪಿ.ಶಿವರಾಜು, ಉಪನ್ಯಾಸಕರಾದ ಯೋಗೇಶ್ ಕುಮಾರ್, ಶಿವಕುಮಾರ್‌ಸ್ವಾಮಿ, ಡಾ.ಎಂ.ಎಸ್.ಕೋಮಲಾ, ಎಚ್.ಬಿ.ಶ್ರೀಧರ್ ಇದ್ದರು.