

ಹರಿಹರ: ನಗರಸಭೆ ಸಾಮಾನ್ಯ ಸಭೆ ಹೊಸ ಬಡಾವಣೆಗಳ ನಿವೇಶನಗಳಿಗೆ ಡೋರ್ ನಂ. ಕೊಡಲು ಮಾತ್ರ ಸೀಮಿತವಾಗಿದೆ ಎನ್ನುವ ನಿಸಿಕೆಯನ್ನು ಗುರುವಾರ ನಡೆಯುವ ಸಭೆ ಸುಳ್ಳು ಮಾಡಲಿದೆಯೇ ಎಂಬ ಕಾತರದಲ್ಲಿ ಸಾರ್ವಜನಿಕರಿದ್ದಾರೆ.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ಅನೇಕ ವಾದ ವಿವಾದದ ನಂತರ ಬಹು ನಿರೀಕ್ಷಿತ ಸಾಮಾನ್ಯ ಸಭೆ ಇಂದು ನಡೆಯಲಿದ್ದು, ಅಭಿವೃದ್ಧಿ ವಿಷಯಗಳು ಚರ್ಚೆಗೆ ಬರಲಿವೆಯೇ ಎಂದು ಕಾದುನೋಡಬೇಕಿದೆ.
ಇತ್ತೀಚೆಗೆ ಪೌರಾಡಳಿತ ಇಲಾಖೆಗೆ ನಗರಸಭೆಯಿಂದ ಸಲ್ಲಿಸಿದ ಮಾಹಿತಿಯ ಪ್ರಕಾರ ನಗರದ 19 ಕಲ್ಯಾಣ ಮಂಟಪ, ಶಾದಿ ಮಹಲ್ ಮತ್ತು ಸಮುದಾಯ ಭವನಗಳು ಅಂದಾಜು 5.84 ಕೋಟಿ ರೂ. ಕಂದಾಯ ಬಾಕಿ ಉಳಿಸಿಕೊಂಡಿವೆ. ನಗರದ ರಸ್ತೆ ದುರಸ್ತಿಗೆ ಅನುದಾನ ಇಲ್ಲ ಎಂಬ ಸಿದ್ಧ ಉತ್ತರ ನೀಡುವ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಷ್ಟು ದೊಡ್ಡ ಮೊತ್ತದ ಕಂದಾಯ ವಸೂಲಿಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದು ಅಚ್ಚರಿ.
ಈ 19 ಕಲ್ಯಾಣ ಮಂಟಪಗಳ ಪೈಕಿ 14 ಮಾತ್ರ ಭೂ ಪರಿವರ್ತನೆಯಾಗಿವೆ. 12 ಕ್ಕೆ ಮಾತ್ರ ನಗರಸಭೆಯಿಂದ ಪರವಾನಗಿ ನೀಡಲಾಗಿದೆ. ಉಳಿದವು ಭೂ ಪರಿವರ್ತನೆ ಮಾಡಿಕೊಂಡಿಲ್ಲ ಹಾಗೂ ಪರವಾನಗಿಯನ್ನೂ ಪಡೆದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ನಗರದ ವಿವಿಧೆಡೆ ಹೊಸದಾಗಿ ಮಿನಿ ಹಾಗೂ ದೊಡ್ಡ ಕಲ್ಯಾಣ ಮಂಟಪಗಳು ತಲೆ ಎತ್ತಿದ್ದರೂ ಅವುಗಳ ಕಂದಾಯ ಬಾಕಿಯ ಮಾಹಿತಿ ಲಭ್ಯವಾಗಿಲ್ಲ. ನಗರಸಭೆಯ ಮಾಹಿತಿಯ ಪ್ರಕಾರ ಇವು ಮಾತ್ರ ಪಟ್ಟಿಯಲ್ಲಿವೆ ಎಂದಾದಲ್ಲಿ ಉಳಿದವು ಇನ್ನೂ ಕಂದಾಯ ಪಾವತಿಯ ಪರಿಧಿಯೊಳಗೆ ಬಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಇವೆಲ್ಲವೂ ಕಂದಾಯದ ಪರಿಧಿ ಸೇರಿದರೆ ಕನಿಷ್ಠ ವಾರ್ಷಿಕ ಹತ್ತಾರು ಲಕ್ಷ ರೂ. ಆದಾಯ ಬರುತ್ತದೆ.
ಇಂದಿನ ಸಭೆಯಲ್ಲಿ ನಿರ್ಣಯಿಸುವರೆ?:ಹೊಸ ಬಡಾವಣೆಗಳ ನಿವೇಶನಗಳಿಗೆ ಡೋರ್ ನಂ. ಕೊಡುವುದರಲ್ಲಿ ಆಸಕ್ತಿ ತೋರುವ ಸದಸ್ಯರು ಗುರುವಾರದ ಸಭೆಯಲ್ಲಿ ಕಂದಾಯ ಬಾಕಿ ವಸೂಲಾತಿಗೂ ಧ್ವನಿ ಎತ್ತಲಿ ಎಂಬುದು ಜನಸಾಮಾನ್ಯರ ಆಶಯವಾಗಿದೆ.
ಕಲ್ಯಾಣ ಮಂಟಪಗಳಿಗೆ ಕಂದಾಯ ಪಾವತಿಗೆ ಮೊದಲ ನೋಟಿಸ್ ನೀಡಿದ್ದು, ಶೀಘ್ರದಲ್ಲೆ 2 ನೇ ನೋಟಿಸ್ ಜಾರಿ ಮಾಡುತ್ತೇವೆ. ತಂದ ನಂತರವೂ ಕಂದಾಯ ಪಾವತಿಸದಿದ್ದರೆ ಸಂಬಂಧಿತ ಕಲ್ಯಾಣ ಮಂಟಪವನ್ನು ಮುನ್ಸಿಪಲ್ ಕಾಯ್ದೆ ನಿಯಮಾವಳಿ ಪ್ರಕಾರ ಜಪ್ತು ಮಾಡಲಾಗುವುದು.
| ಸುಬ್ರಹ್ಮಣ್ಯ ಶ್ರೇಷ್ಠಿ, ಪೌರಾಯುಕ್ತರು, ನಗರಸಭೆ, ಹರಿಹರ.
ಪ್ರಮುಖ ಬಾಕಿದಾರರು : ಬಾಕಿ ಮೊತ್ತ (ಲಕ್ಷ ರೂ.ಗಳಲ್ಲಿ): ಸಿದ್ದೇಶ್ವರ ಪ್ಯಾಲೇಸ್-92 ಲಕ್ಷ , ಯಲ್ಲಮ್ಮ ತುಳಜಾಸಾ ಭೂತೆ - 45.58, ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪ 42.28, ಯಶಸ್ವಿನಿ ಕನ್ವೆಷನಲ್ ಹಾಲ್-20.27, ಲಕ್ಷ್ಮೀ ಮಹಲ್-7.07 . ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪ- 76.38, ಕಾಟ್ವೆ ಕಲ್ಯಾಣ ಮಂಟಪ-5.70, ಎಸ್ಎಸ್ಕೆ ಕಲ್ಯಾಣ ಮಂಟಪ-27.25, ಎಚ್ಎಎಂ ಶಾದಿ ಮಹಲ್-24.92, ಕಸ್ತೂರಿಬಾಯಿ ತುಕಾಮಣಿಸಾ ಭೂತೆ ಕಲ್ಯಾಣ ಮಂಟಪ-21.47, ಪ್ಯಾರಡೈಸ್ ಕನ್ವೆಷನಲ್ ಹಾಲ್-8.92 , ವಾಸವಿ ಕಲ್ಯಾಣ ಮಂಟಪ-3.16, ನಾಮದೇವ ಕಲ್ಯಾಣ ಮಂಟಪ-8.45, ಸಂತ ಆರೋಗ್ಯ ಪುಣ್ಯಕ್ಷೇತ್ರ ಚರ್ಚ್-46.75 ರೂ., ಮಮ್ತಾಜ್ ಕನ್ವೆಷನಲ್ ಹಾಲ್-21.04, ಶ್ರೀರಾಮ ಮಂದಿರ ಕಲ್ಯಾಣ ಮಂಟಪ-10.30, ಶ್ರೀ ಗುರು ಬಸವರಾಜ್ ದೇಶೀಕೇಂದ್ರ ಐರಣಿ ಮಠ-15.12, ಅಂಜುಮನ್ ಇಸ್ಲಾಮಿಯಾ ಶಾದಿ ಮಹಲ್ 35.48 ಲಕ್ಷ ರೂ. ಹೀಗೆ ಒಟ್ಟು 5,83,99015 ರೂ. ಕಂದಾಯ ಬಾಕಿ ಉಳಿದಿದೆ.