

ಮಡಿಕೇರಿ: ಇಂದು ಬ್ರಾಹ್ಮಣರು ಸಂಸ್ಕಾರ ಮರೆಯುತ್ತಿದ್ದಾರೆ. ಸಂಸ್ಕಾರವನ್ನು ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆ ಅದನ್ನು ಸದೃಢಗೊಳಿಸುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವಿದ್ವಾನ್ ಭಾನುಪ್ರಕಾಶ್ ಶರ್ಮ ಕರೆ ನೀಡಿದರು.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಯಶಸ್ವಿ ನೂರು ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆ ನಗರದಲ್ಲಿ ನಡೆದ ಶತಮನೋತ್ಸವ ಸಂಭ್ರಮಾಚರಣೆ ಹಾಗೂ ಶತಮಾನೋತ್ಸವ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
ಬ್ರಾಹ್ಮಣ ಎನ್ನುವುದು ಒಂದು ಜಾತಿಯಲ್ಲ. ಅದು ಸಂಸ್ಕಾರ. ಭಾರತ ದೇಶದಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಸಂಸ್ಕಾರಗಳ ಆಚರಣೆಗಳ ಮೂಲಕವೇ ಶ್ರೇಷ್ಠ ಎನಿಸಿಕೊಂಡಿದ್ದೇವೆ. ಹೆಜ್ಜೆ ಹೆಜ್ಜೆಗೂ ಸಂಸ್ಕಾರವನ್ನು ನಾವು ಅನುಸರಿಸಬೇಕಾಗುತ್ತದೆ. ಆದರೆ ಇಂದು ಸಂಸ್ಕಾರ ಮರೆಯುತ್ತಾ ಬರುತ್ತಿರುವುದರಿಂದ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಮುಂದುವರಿಕೆ ಅಸಾಧ್ಯವಾಗಿದೆ. ಸಂಸ್ಕಾರವನ್ನು ಅನುಸರಿಸದೆ ಇರುವುದರಿಂದ ನಾವು ಬ್ರಾಹ್ಮಣ ಎಂದು ಹೇಳಿಕೊಳ್ಳುವ ಶಕ್ತಿಯೂ ಕುಂದುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಕಾರಕ್ಕೆ ಮತ್ತೆ ಜೀವ ತುಂಬುವ ಕಾರ್ಯ ಮಾಡಬೇಕು. ಬೆಂಕಿ ಕೆಂಡದ ರೀತಿಯಲ್ಲಿ ಸಂಸ್ಕಾರ ಸಿದ್ಧಿ ಮಾಡಿಕೊಂಡು ಪ್ರಕಾಶಮಾನವಾಗಬೇಕು. ಕೊನೆ ಕಾಲದಲ್ಲಿ ನಮ್ಮ ಜೊತೆ ಧರ್ಮದ ಫಲ ಮಾತ್ರ ಬರುತ್ತದೆ, ಆದ್ದರಿಂದ ಧರ್ಮ ಕಾರ್ಯದ ಮೂಲಕ ಸಾರ್ಥಕತೆಯನ್ನು ಪಡೆಯಬೇಕು. ನಮ್ಮ ಸಂಪಾದನೆಯಲ್ಲಿ ಧರ್ಮ ಕಾರ್ಯಗಳಿಗೂ ವಿನಿಯೋಗಿಸಬೇಕೆಂದು ಭಾನುಪ್ರಕಾಶ್ ಶರ್ಮ ತಿಳಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಕೆಐಎಂಎಸ್ ಸಂಸ್ಥೆಯ ಪ್ರೊ.ಗಿರಿಧರ್ ಉಪಾಧ್ಯಾಯ, ಮಕ್ಕಳಲ್ಲಿ ಭವ್ಯ ಭಾರತದ ಬಗ್ಗೆ ಅಭಿಮಾನ ಮೂಡಿಸಬೇಕು. ದೇಶ ಕಟ್ಟುವ ಕುರಿತು ತಿಳಿಹೇಳಬೇಕು. ಪ್ರತಿಯೊಬ್ಬರು ತಾವೇ ದೇಶವೆಂದು ಭಾವಿಸಿ ದೇಶಾಭಿಮಾನದ ಮೂಲಕ ಕಾರ್ಯನಿರ್ವಹಿಸಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಕನಸನ್ನು ನನಸು ಮಾಡಬೇಕು. ಭಾರತ ಉತ್ತುಂಗಕ್ಕೇರಬೇಕಾದರೆ ಬ್ರಾಹ್ಮಣರ ಸಹಕಾರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ನಮ್ಮತನ ಕಳೆದುಕೊಳ್ಳದೆ ಮಕ್ಕಳ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಿದೆ. ವಿಭಿನ್ನ ಭಾಷೆ ಮತ್ತು ಸಂಸ್ಕೃತಿ ಹೊಂದಿರುವ ಭಾರತದ ಮಕ್ಕಳು ಸಂಸ್ಕಾರಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ.ಗೋಪಾಲಕೃಷ್ಣ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಶತಮಾನೋತ್ಸವ ಭವನದ ನಿರ್ಮಾಣವೇ ಸಾಕ್ಷಿಯಾಗಿದೆ. ನಿರಂತರ ಅತಿವೃಷ್ಟಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಭವನ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದಕ್ಕೆ ಸಮಾಜ ಬಾಂಧವರ ಸಹಕಾರವೇ ಕಾರಣವೆಂದು ಕೃತಜ್ಞತೆ ಸಲ್ಲಿಸಿದರು. ಇನ್ನು ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಇದೇ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ.ಎ.ಆರ್.ರಾಜರಾಮ, ಕಷ್ಟದಲ್ಲಿರುವ ಹಿರಿಯ ಅರ್ಚಕರಿಗೆ ಸಹಾಯ ಮಾಡಲು ವಿಪ್ರ ನಿಧಿ ಸ್ಥಾಪಿಸಲಾಗುತ್ತಿದ್ದು, ಪ್ರತಿವರ್ಷ ಐವರಿಗೆ ನೆರವು ನೀಡಲಾಗುವುದು. ಸಂಧ್ಯಾಕಾಲದ ಬಂಧುಗಳ ನೆರವಿಗಾಗಿ ಸಂಧ್ಯಾ ನಿಧಿಯನ್ನು ಸ್ಥಾಪಿಸಿ ವಾರ್ಷಿಕ ೨೪ ಸಾವಿರ ರೂ.ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಎಸ್.ಸುರೇಶ್ ಸಂಪಾದಕತ್ವದ "ಶತಧಾರಾ" ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ದಾನಿಗಳು ಹಾಗೂ ಭವನ ನಿರ್ಮಾಣಕ್ಕೆ ಸಹಕರಿಸಿದ ಸರ್ವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಶತಮಾನೋತ್ಸವ ಭವನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ದಾನಿಗಳಾದ ಅಮೆರಿಕಾ ನಾರ್ತ್ ಕೆರೋಲಿನಾದ ಡಾ.ರಾಜಾಭಟ್, ಮುಂಬೈಯ ದೇವಕಿ ಎಂ.ಜನಾರ್ಧನ, ಅಭಿರಾಂ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸುದರ್ಶನ ಭಾರತೀಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.