ಇಂದು ವಿಶ್ವ ದೃಷ್ಟಿ ದಿನ: ದೃಷ್ಟಿ ಇಲ್ಲದಿದ್ದರೆ ಪ್ರಪಂಚವೇ ಶೂನ್ಯ

Vision day
Published on

ಯಾವುದೇ ವಸ್ತುವಿನ ಬೆಲೆ ತಿಳಿಯುವುದು ಅದನ್ನು ಕಳೆದುಕೊಂಡ ಮೇಲೆಯೇ. ಇದು ದೃಷ್ಟಿಗೂ ಅನ್ವಯ. ದೃಷ್ಟಿ ಇಲ್ಲ ಎಂದರೆ ಇಡೀ ಪ್ರಪಂಚವೇ ಶೂನ್ಯ. ಹಾಗಾಗಿ ದೃಷ್ಟಿ ಕಳೆದುಕೊಳ್ಳುವ ಮುನ್ನ ಅದನ್ನು ಉಳಿಸಿಕೊಳ್ಳಲು ನಮ್ಮ ಕಣ್ಣುಗಳನ್ನು ನಾವು ಪ್ರೀತಿಸಬೇಕು. ಅದಕ್ಕೆ ಮುನ್ನೆಚ್ಚರಿಕೆಯೊಂದೇ ಮದ್ದು ಎನ್ನುತ್ತಾರೆ ಖ್ಯಾತ ನೇತ್ರತಜ್ಞ ಡಾ. ಭುಜಂಗಶೆಟ್ಟಿ. ವಿಶ್ವ ದೃಷ್ಟಿ ದಿನ (ಅ. 14) ಅಂಗವಾಗಿ ‘ಕಣ್ಣಿನ ಕಾಳಜಿ’ ಶೀರ್ಷಿಕೆಯಡಿ ‘ವಿಜಯವಾಣಿ’ ಕ್ಲಬ್​ಹೌಸ್ ಮಂಗಳವಾರ ಹಮ್ಮಿಕೊಂಡಿದ್ದ ಆನ್​ಲೈನ್ ಸಂವಾದದಲ್ಲಿ ಅವರು ಮಾತನಾಡಿದರು. ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಕಾಲಕಾಲಕ್ಕೆ ನೇತ್ರತಜ್ಞರಿಂದ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿ ಸಮಸ್ಯೆ ನಿಯಂತ್ರಿಸಬಹುದು. ಅದರಲ್ಲೂ ಮಧುಮೇಹ ಇದ್ದವರಿಗೆ ಮೊದಲು ಕಾಣಿಸಿಕೊಳ್ಳುವುದೇ ದೃಷ್ಟಿ ಸಮಸ್ಯೆ. ಹಾಗಾಗಿ ಅಂತಹವರು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲೆಗೆ ಸೇರುವ ಮುನ್ನ ನೇತ್ರಪರೀಕ್ಷೆ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ನೇತ್ರ ಸಮಸ್ಯೆಗಳನ್ನು ಬಾಲ್ಯದಲ್ಲೇ ಪತ್ತೆ ಹೆಚ್ಚಿ ಚಿಕಿತ್ಸೆ ಕೊಡಿಸದಿದ್ದರೆ, ಸಮಸ್ಯೆ ಬೆಳೆದು ಸರಿಪಡಿಸಲಾಗದ ಸ್ಥಿತಿ ತಲುಪುತ್ತದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಕಣ್ಣಿನ ತಪಾಸಣೆಯ ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಇದರಿಂದ ಮಕ್ಕಳ ಕಣ್ಣಿನ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಇದಕ್ಕೆ ಸರ್ಕಾರ ನಿಯಮ ರೂಪಿಸಲೆಂದು ಕಾಯುವ ಬದಲು ಪ್ರತಿಯೊಬ್ಬ ಪಾಲಕರೂ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಸಮಸ್ಯೆ ಇರಲಿ, ಇಲ್ಲದಿರಲಿ ಒಮ್ಮೆ ಕಣ್ಣಿನ ಪರೀಕ್ಷೆ ಮಾಡಿಸುವುದು ಸೂಕ್ತ.

ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಒತ್ತು ನೀಡಿ

ನಮ್ಮ ಮಕ್ಕಳ ಕಣ್ಣಿನ ಆರೋಗ್ಯ ನಾವೇ ನೋಡಿಕೊಳ್ಳಬೇಕು. ಕಣ್ಣು ಇತರ ಅಂಗಾಂಗಗಳಂತಲ್ಲ. ಹಾಗಾಗಿ ಮಕ್ಕಳ ಕಣ್ಣಿನ ಸಮಸ್ಯೆ ಗುರುತಿಸಲು ವೈದ್ಯರೇ ಬೇಕಿಲ್ಲ. ಪ್ರಮುಖವಾಗಿ ಮೆಳ್ಳಗಣ್ಣು. ಇದು ಒಂದು ರೀತಿ ಗಂಭೀರವಾದ ಸಮಸ್ಯೆ. ಆದರೆ ನಮ್ಮ ದೇಶದಲ್ಲಿ ಮೆಳ್ಳಗಣ್ಣನ್ನು ಅದೃಷ್ಟ - ದುರಾದೃಷ್ಟ ಎಂದು ತಿಳಿದು ಚಿಕಿತ್ಸೆ ಕೊಡಿಸದೆ ನಿರ್ಲಕ್ಷಿಸುತ್ತಾರೆ. ಪರಿಣಾಮ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಮಸ್ಯೆಗೆ ಒಳಗಾಗುತ್ತಾರೆ. ಮಕ್ಕಳಿಗೆ ಮೆಳ್ಳಗಣ್ಣು ಇದ್ದರೆ ಅದು ಅನಾರೋಗ್ಯಕರ ಎಂದರ್ಥ. ಹಾಗಾಗಿ ಕೂಡಲೇ ನೇತ್ರತಜ್ಞರಲ್ಲಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕು. ಬಾಲ್ಯದಲ್ಲಿ ಕಣ್ಣಿನ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ಕೊಡಿಸದಿದ್ದರೆ ಅವರೊಂದಿಗೆ ಸಮಸ್ಯೆಯೂ ಬೆಳೆದು ದೊಡ್ಡದಾಗಿ ಎಷ್ಟೇ ಹಣ ಖರ್ಚು ಮಾಡಿದರೂ ಸರಿಪಡಿಸಲಾಗದ ಹಂತಕ್ಕೆ ತಲುಪುತ್ತದೆ. ಹಾಗಾಗಿ ಮಕ್ಕಳ ಕಣ್ಣುಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.

ಕಂಪ್ಯೂಟರ್ ವಿಷನ್ ಸಿಂಡ್ರೋಮ್

ನಾಲ್ಕೈದು ದಶಕಗಳ ಹಿಂದೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಸಮಸ್ಯೆ ಎನ್ನುವುದೇ ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಕ್ಕಳಿಂದ ಹಿರಿಯರವರೆಗೂ ಎಲ್ಲರಲ್ಲೂ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ತೊಂದರೆಯಿಂದ ನಾರಾಯಣ ನೇತ್ರಾಲಯ ಒಂದರಲ್ಲೇ ನಿತ್ಯ 20-30 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ನಂತರವಂತೂ ಆನ್​ಲೈನ್ ತರಗತಿಯಿಂದಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಶಾಲೆ ಹಾಗೂ ಸ್ನೇಹಿತರ ಒಡನಾಟವಿಲ್ಲದೆ ಮಕ್ಕಳಿಗೆ ದಿನ ಕಳೆಯುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ನಗರ ಪ್ರದೇಶದ ಮಕ್ಕಳಲ್ಲಿ ಈ ತೊಂದರೆ ಹೆಚ್ಚು. ಹಾಗಾಗಿ ಈ ಮಕ್ಕಳು ಅರ್ಧದಿನ ಆನ್​ಲೈನ್ ತರಗತಿ ಎಂದು ಮೊಬೈಲ್ ಮುಂದೆ ಕಳೆದರೆ ಉಳಿದ ಸಮಯವನ್ನು ವಿಡಿಯೋ ಗೇಮ್ ಟಿವಿ ಹಾಗೂ ಮನರಂಜನೆಗಾಗಿ ಮೊಬೈಲ್ ಸೇರಿ ದಿನವಿಡೀ ಡಿಜಿಟಲ್ ಡಿವೈಸ್​ಗಳನ್ನು ನೋಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಪರಿಣಾಮ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ದೊಡ್ಡವರದೂ ಇದೇ ಪರಿಸ್ಥಿತಿಯಾಗಿದೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.

ಡಿಜಿಟಲ್ ಫಾಸ್ಟಿಂಗ್

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆ ಮಾತಿದೆ. ಇತ್ತೀಚಿನ ದಿನಗಳಲ್ಲಿ ಅದು ಮನುಷ್ಯನ ಚಟುವಟಿಕೆಗಳಿಗೂ ಅನ್ವಯವಾಗಿದೆ. ಮೊಬೈಲ್ ಬಳಸದಿದ್ದರೆ ಕಣ್ಣಿನ ಸಮಸ್ಯೆ ಇಲ್ಲ ಎಂದು ಹೇಳುವಂತಾಗಿದೆ. ಹಾಗಾಗಿ ಉತ್ತಮ ಆರೋಗ್ಯಕ್ಕೆ ಹೇಗೆ ಉಪವಾಸ ಒಳ್ಳೆಯದೋ. ಅದೇ ರೀತಿ ಪ್ರಸ್ತುತ ಸಂದರ್ಭದಲ್ಲಿ ಕಣ್ಣಿನ ಆರೋಗ್ಯಕ್ಕೆ ಡಿಜಿಟಲ್ ಫಾಸ್ಟಿಂಗ್ ಮಾಡುವ ಅಗತ್ಯವಿದೆ.

ಮನುಷ್ಯ ಎದುರಿಸುತ್ತಿರುವ ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಪ್ರಮುಖ ಕಾರಣ ಆಹಾರ ಕ್ರಮ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಹಾಗೂ ಅತಿಯಾದ ಸಕ್ಕರೆ ಮತ್ತು ಸಿರಿ ಪದಾರ್ಥಗಳ ಬಳಕೆಯಿಂದ ಮಧುಮೇಹ ಕಾಯಿಲೆ ಹೆಚ್ಚು ಬಾದಿಸುತ್ತಿದೆ. ಊಟ ತಪ್ಪಾದರೆ ಯಾವುದೇ ಔಷಧ ಸೇವಿಸಿದರೂ ಪ್ರಯೋಜನವಿಲ್ಲ. ಅದರಲ್ಲೂ ಒಮ್ಮೆ ಮಧುಮೇಹ ಬಂದರೆ, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಅದು ಇತರೆ ನಾನಾ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿಯೇ ಇಂದು ಆಹಾರ ಎಂದರೆ ಔಷಧ ಎನ್ನುವಂತಾಗಿದೆ. ಬದಲಿಗೆ ನಮಗೆ ನಮ್ಮ ಆಹಾರವೇ ಮದ್ದಾಗಬೇಕು. ಹಾಗಾಗಿ ಆರೋಗ್ಯಕರ ಅಹಾರ ಹಾಗೂ ಚಟುವಟಿಕೆಯುಕ್ತ ಜೀವನದತ್ತ ಗಮನ ಹರಿಸಿ.

ಡಾ. ರಾಜ್ ಪ್ರೇರಣೆ

ರಾಜ್ಯದಲ್ಲಿ ಡಾ.ರಾಜ್ ಕುಮಾರ್ ನೇತ್ರದಾನ ಮಾಡುವ ಮೂಲಕ ಪ್ರೇರಣೆಯಾಗಿದ್ದಾರೆ. ಅವರ ಪತ್ನಿ ಪಾರ್ವತಮ್ಮ ಕೂಡ ನೇತ್ರದಾನ ಮಾಡಿದ್ದಾರೆ. ಅವರ ಮಕ್ಕಳು ನೇತ್ರದಾನ ಹಾಗೂ ದೇಹದಾನದ ಪ್ರತಿಜ್ಞೆ ಸ್ವೀಕರಿಸಿ ಮಾದರಿಯಾಗಿದ್ದಾರೆ.

ನೇತ್ರದಾನ ಮಹಾದಾನ

ಜನರು ಆರೋಗ್ಯದ ಜತೆಗೆ ಕಣ್ಣಿನ ರಕ್ಷಣೆ ಬಗ್ಗೆ ಗಮನಹರಿಸುವುದು ತುಂಬಾ ಅಗತ್ಯವಾಗಿದೆ. ಜತೆಗೆ ನೇತ್ರದಾನ ಪ್ರತಿಜ್ಞೆ ಸ್ವೀಕರಿಸಬೇಕಿದೆ. ನೇತ್ರದಾನದಿಂದ ಕತ್ತಲಿನಲ್ಲಿರುವ ಅಂಧರ ಬಾಳಿಗೆ ಬೆಳಕು ನೀಡಿದ ಪುಣ್ಯ ದೊರೆಯುತ್ತದೆ. ಕರ್ನಾಟಕ ಸೇರಿ ದೇಶದಲ್ಲಿ ನೇತ್ರದಾನಿಗಳ ಕೊರತೆ ವ್ಯಾಪಕವಾಗಿದೆ. ಬೇಡಿಕೆಯಷ್ಟು ಲಭ್ಯತೆ ಇಲ್ಲ. ರಾಜ್ಯದಲ್ಲಿ ವರ್ಷಕ್ಕೆ ಕೇವಲ 4-5 ಸಾವಿರ ನೇತ್ರ ಸಂಗ್ರಹವಾಗುತ್ತದೆ. ಅದರಲ್ಲೂ ಕೋವಿಡ್ ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಅದೂ ಇಲ್ಲವಾಗಿದೆ. ಹಾಗಾಗಿ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಮುಂದಾಗಬೇಕು. ಜತೆಗೆ ಸ್ಥಳೀಯವಾಗಿ ಜನರಲ್ಲಿ ನೇತ್ರದಾನದ ಅರಿವು ಮೂಡಿಸುವ ಮೂಲಕ ನೇತ್ರದಾನದ ರಾಯಭಾರಿಗಳಾಗಿ ಜನರು ಸೇವೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಶಾಲೆಯ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮೃತರ ಕುಟುಂಬದವರ ಮನವೊಲಿಸಿ ನೇತ್ರದಾನ ಪಡೆದು ನೇತ್ರನಿಧಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರೀಕ್ಷೆಯಿಂದ ಸಮಸ್ಯೆ ಪತ್ತೆ

ಗ್ಲಕೋಮ ಇದು ಸಾಮಾನ್ಯ ಕಾಯಿಲೆ ಅಲ್ಲದಿದ್ದರೂ, ಪರಿಣಾಮ ಗಂಭೀರ. ಇದು ಕಣ್ಣಿನ (ಆಪ್ಟಿಕ್ ನರ್ವ್) ನರಕ್ಕೆ ಹಾನಿಯಾದರೆ ನಿಧಾನವಾಗಿ ದೃಷ್ಟಿನಾಶ ಮಾಡುವ ಕಾಯಿಲೆ ಗ್ಲಕೋಮ. ಇದು ನೋವು ರಹಿತವಾಗಿದ್ದು, ಅರಿವಿಗೆ ಬರುವಷ್ಟರಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನ ಆಗುವುದಿಲ್ಲ. ಹಾಗಾಗಿ ನಿಯಮಿತ ತಪಾಸಣೆಯಿಂದ ಇಂತಹ ಅಗೋಚರ ಸಮಸ್ಯೆ ಪತ್ತೆ ಹಚ್ಚಬಹುದು. ಗ್ಲಕೋಮ ಬಂದರೆ ಮಧುಮೇಹ, ರಕ್ತದೊತ್ತಡದ ರೀತಿಯಲ್ಲೇ ಜೀವನವಿಡೀ ಔಷಧ ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಗ್ಲಕೋಮಾ ಸಮಸ್ಯೆ ಇದ್ದರೆ ವೈದ್ಯರಿಗೆ ತಿಳಿಸಬೇಕು.

ಕಣ್ಣಿನ ರಕ್ಷಣೆಗೆ ವ್ಯಾಯಾಮ ಇದೆಯೇ?

ಕಣ್ಣಿನ ರಕ್ಷಣೆಗೆ ನಿರ್ದಿಷ್ಟ ವ್ಯಾಯಾಮ ಇಲ್ಲ. ಆದರೆ ಕಣ್ಣಿನ ಸಮಸ್ಯೆ ಬರದಂತೆ ತಡೆಯಲು ಅದರಲ್ಲೂ ಕಂಪ್ಯೂಟರ್ ವಿಷನ್ ಸಿಂಡ್ರೋಮ್ಂದ ಪರಿಹಾರ ಕಂಡುಕೊಳ್ಳಲು 20-20-20 ನಿಯಮ ಅನುಸರಿಸಬೇಕು. ಅಂದರೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೆ ಒಮ್ಮೆ 20 ಬಾರಿ ಕಣ್ಣಿನ ರೆಪ್ಪೆಯನ್ನು ಮಿಟುಕಿಸಬೇಕು. ಹಾಗೇಯೇ 20 ಅಡಿ ದೂರದ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹೀಗೆ ಮಾಡುವುದರಿಂದ ಕಣ್ಣಿನ ಮೇಲಾಗುವ ಒತ್ತಡ ಕಡಿಮೆಯಾಗಲಿದೆ.

ಕ್ಯಾಟರ್ಯಾಕ್ಟ್ 50ರ ನಂತರ ಕಾಡುವ ಸಮಸ್ಯೆ

ಕಣ್ಣಿನ ಪೊರೆ (ಕ್ಯಾಟರ್ಯಾಕ್ಟ್ ) ಇದು 50 ವರ್ಷಗಳ ನಂತರ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ವಯಸ್ಸಾದಂತೆ ತಲೆಯಲ್ಲಿ ಬಿಳಿ ಕೂದಲು ಬರುವ ಹಾಗೆ ಕಣ್ಣಿನ ಕಾರ್ನಿಯಾ ಮೇಲೆ ಬಿಳಿ ಪೊರೆ ಬೆಳೆದು ಬೆಳಕು ಕಾಣಿಸದಂತಾಗುತ್ತದೆ. ಕೆಲವೊಮ್ಮೆ ಹುಟ್ಟಿದ ಮಕ್ಕಳಲ್ಲೂ ಬರಬಹುದು. ಇದಕ್ಕೆ 10-15 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು.

ಲೇಸರ್ ಚಿಕಿತ್ಸೆಗೆ ಯಾವ ವಯಸ್ಸು ಸೂಕ್ತ?

ಲೇಸರ್ ಚಿಕಿತ್ಸೆಗೆ 18 ವರ್ಷ ನಿಗದಿಪಡಿ ಸಲಾಗಿದೆ. ಅಲ್ಲಿಯವರೆಗೂ ದೃಷ್ಟಿ ಬೆಳವಣಿಗೆ ಯಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ.

ಹಳ್ಳಿಗಳಲ್ಲಿ ನೇತ್ರದಾನಕ್ಕೆ ಸರಿಯಾದ ವ್ಯವಸ್ಥೆ ಇಲ್ಲ

ನೇತ್ರದಾನ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೇ ನೇತ್ರ ದಾನ ಪಡೆಯಲು ವೈದ್ಯರೇ ಆಗಬೇಕೆಂದಿಲ್ಲ. ತರಬೇತಿ ಪಡೆದ ಯಾರು ಬೇಕಾದರೂ ದಾನಿಗಳಿಂದ ಕಣ್ಣು ಪಡೆದು ಹತ್ತಿರದ ನೇತ್ರ ನಿಧಿಗೆ ತಲುಪಿಸ ಬಹುದು. ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗೆ ನೇತ್ರದಾನ ಪಡೆಯಬೇಕು. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಇರುಳು ಕುರುಡಿಗೆ ಶಾಶ್ವತ ಪರಿಹಾರ ಇದೆಯೇ?

ಇರುಳು ಕುರುಡು ಸಮಸ್ಯೆಗೆ ಚಿಕಿತ್ಸೆ ನೀಡಲು ಜೀನ್ ಥೆರಪಿ ಹಾಗೂ ಸ್ಟೆಮ್ ಸೆಲ್ ಥೆರಪಿ ಕುರಿತು ಸಂಶೋಧನೆ ನಡೆಯುತ್ತಿದೆ. ಆದರೆ ಇನ್ನೂ ಪರಿಹಾರ ದೊರೆತಿಲ್ಲ.

ಪಾಲಿಸಬೇಕಾದ ಅಂಶಗಳು

  • ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ತಪ್ಪದೇ ಕಣ್ಣಿನ ತಪಾಸಣೆ ಮಾಡಿಸಿ.
  • ಆರೋಗ್ಯಕರ ಆಹಾರ ಹಾಗೂ ಚಟುವಟಿಕೆಗಳು ಕಣ್ಣಿನ ರಕ್ಷಣೆಗೆ ಉತ್ತಮ ಮಾರ್ಗ.
  • ಮೊಬೈಲ್, ಟಿವಿ ಸೇರಿ ಡಿಜಿಟಲ್ ಡಿವೈಸ್​ಗಳ ಬಳಕೆ ಮಿತವಾಗಿರಲಿ.
  • ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ವರ್ಷಕ್ಕೆ ಒಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಬೇಕು.
  • ಮಧುಮೇಹಿಗಳು ವರ್ಷಕ್ಕೆ ಎರಡು ಬಾರಿ ಕಣ್ಣಿನ ತಪಾಸಣೆ ಮಾಡಿಸಬೇಕು.
  • ಮನೆಯಿಂದ ಹೊರಗೆ ದೂಳು ಹಾಗೂ ಅಲರ್ಜಿ ಯಿಂದ ಕಣ್ಣುಗಳನ್ನು ರಕ್ಷಿಸಲು ಕನ್ನಡಕ ಧರಿಸಬೇಕು.
  • ಕಣ್ಣುಗಳಿಗೆ ಬಳಸುವ ಔಷಧಗಳ ಅವಧಿ ಹೆಚ್ಚಿದ್ದರೂ, ಔಷಧ ಬಾಟಲಿ ಮುಚ್ಚಳ ಒಮ್ಮೆ ತೆರೆದರೆ ಒಂದು ತಿಂಗಳ ಅವಧಿ ನಂತರ ಅದನ್ನು ಬಳಸಬಾರದು.
  • ಕಣ್ಣಿನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಸ್ವಯಂ ಚಿಕಿತ್ಸೆ ಬದಲು ವೈದ್ಯರಲ್ಲಿ ತೋರಿಸಬೇಕು.
  • 40 ವರ್ಷ ಮೇಲ್ಪಟ್ಟವರು ದೃಷ್ಟಿ ಸಮಸ್ಯೆ ತಡೆ ಯಲು ರೀಡಿಂಗ್ ಗ್ಲಾಸ್ ಬಳಸುವುದು ಸೂಕ್ತ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net