ಸಂಗಮೇಶ್ವರ ಜಾತ್ರೋತ್ಸವ, ರಥೋತ್ಸವ

HYR Sangameshwara tmpl
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ತಾಲೂಕಿನ ಕೂಡ್ಲಹಳ್ಳಿ ಗ್ರಾಮ ಸಮೀಪ ವೇದಾವತಿ-ಸುವರ್ಣಮುಖಿ ನದಿ ಸಂಗಮ ಸ್ಥಳದಲ್ಲಿ ನೆಲೆಸಿರುವ ಸಂಗಮೇಶ್ವರ ಸ್ವಾಮಿ ಜಾತ್ರೋತ್ಸವ ಸೆ.10 ರಿಂದ 12ರವರೆಗೆ ವೈಭವದಿಂದ ನೆರವೇರಲಿದೆ.

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೋತ್ಸವ ನಡೆಯಲಿದ್ದು, ಭಾನುವಾರ ಗಂಗಾ ಪೂಜೆ, ಗಣ ಪತಿ ಪೂಜೆ, ಹೋಮ-ಹವನ, ಮಹಾ ಮಂಗಳಾರತಿ ಇತರ ಧಾರ್ಮಿಕ ಕಾರ್ಯ ನೆರವೇರಲಿವೆ.

ಕಡೇ ಶ್ರಾವಣ ಮಾಸದ ಸೋಮವಾರ ಮಧ್ಯಾಹ್ನ 2.30 ರಿಂದ 3.30ರೊಳಗೆ ರಥೋತ್ಸವ ನಡೆಯಲಿದೆ. ಜಾತ್ರೋತ್ಸವ ನಿಮಿತ್ತ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆಯಲಿದ್ದಾರೆ.

ಇಷ್ಟಾರ್ಥ ಸಿದ್ಧಿ: ಸಂಗಮೇಶ್ವರ ಸ್ವಾಮಿ ದರ್ಶನ ಹಾಗೂ ನದಿ ಸಂಗಮ ಸ್ಥಳದಲ್ಲಿ ಗಂಗಾ ಸ್ನಾನ, ಪಿಂಡ ಪ್ರಧಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸ್ವಾಮಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮೈಸೂರು ಅರಸರ ಆಳ್ವಿಕೆಯಲ್ಲಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಶ್ರಾವಣ ಮಾಸ, ಯುಗಾದಿ ಇತರ ಶುಭ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ದೇವರ ಉತ್ಸವ ಮೂರ್ತಿಗಳನ್ನು ವೇದಾವತಿ-ಸುವರ್ಣಮುಖಿ ನದಿ ಸಂಗಮ ಸ್ಥಳಕ್ಕೆ ಕರೆತಂದು ಪುಣ್ಯೋಜನ ಮಾಡಲಾಗುತ್ತದೆ.

ದೇಗುಲದ ಎದುರು ಸುಂದರ ಕೆತ್ತನೆಯ ಕಲ್ಲುಕಂಬ, ಗರ್ಭ ಗುಡಿಯಲ್ಲಿ ಶಿವಲಿಂಗ, ಬಸವಣ್ಣ ಮೂರ್ತಿ, ಗಣೇಶ ಮೂರ್ತಿಗಳಿವೆ.

ದೇವಸ್ಥಾನದ ಸುತ್ತ ಸುಂದರ ಮರ ಗಿಡ, ಹಸಿರು ಪರಿಸರ, ಆಹ್ಲಾದಕರ ವಾತಾವರಣ ಆಸ್ತಿಕರನ್ನು ಆಕರ್ಷಿಸುತ್ತದೆ. ಇಲ್ಲಿ ವರ್ಷವಿಡೀ ವಿವಾಹ ಕಾರ್ಯ ನೆರವೇರುತ್ತವೆ. ಶ್ರಾವಣ ಮಾಸದ ಕಡೇ ಸೋಮವಾರ ವೈಭವದಿಂದ ಜಾತ್ರೋತ್ಸವ ಜರುಗುತ್ತದೆ.

ದೇಗುಲದಲ್ಲಿ ನಿತ್ಯ ಪೂಜೆ: ಅರ್ಚನೆ, ಅಭಿಷೇಕ, ಎಲೆ ಪೂಜೆ, ಎಳ ನೀರು ಅಭಿಷೇಕ, ಅಷ್ಟೋತ್ತರ, ನಿತ್ಯ ಅಲಂಕಾರ, ಶ್ರಾವಣ ಮತ್ತು ಕಾರ್ತೀಕ ಮಾಸದಲ್ಲಿ ವಿಶೇಷ ಪೂಜಾಕಾರ್ಯ, ನಿತ್ಯ ಇತರ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.

ಪ್ರವಾಸಿ ತಾಣ: ವರುಣನ ಕೃಪೆಯಿಂದ ವೇದಾವತಿ-ಸುವರ್ಣಮುಖಿ ನದಿಗೆ ಜೀವಕಳೆ ಬಂದಿದ್ದು, ದೇವಸ್ಥಾನದ ಕೂಗಳತೆ ದೂರದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ವರ್ಷ ಪೂರ್ತಿ ಮೌನ ಗಂಗೆಯಂತೆ ಹರಿವ ಎರಡು ನದಿಗಳ ನೀರು, ಹಿತವಾದ ಪರಿಸರ, ಸಮೀಪದಲ್ಲಿ ಗಿಡ ಮರ, ಪಕ್ಷಿಗಳ ಕಲರವ, ಕಲ್ಪವೃಕ್ಷಗಳ ತೋಟ ಸುಂದರ ಪರಿಸರ ಪ್ರವಾಸಿಗರು ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮುದುನೀಡುವ ಸ್ಥಳ.

ಮೂಲಸೌಲಭ್ಯ ಅಗತ್ಯ: ವೇದಾವತಿ-ಸುವರ್ಣಮುಖಿ ನದಿ ಸಂಗಮ ಸ್ಥಳದಲ್ಲಿರುವ ಸಂಗಮೇಶ್ವರ ದೇವಾಲಯ, ಪುರಾತನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ರಾಜ್ಯದ ವಿವಿಧೆಡೆಯಿಂದ ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಭಕ್ತರ ಅನುಕೂಲ ಹಾಗೂ ಶುಭ ಕಾರ್ಯಕ್ಕೆ ಕಲ್ಯಾಣ ಮಂಟಪ, ವಸತಿಗೃಹದ ಅವಶ್ಯವಿದೆ.-ವೀರಭದ್ರಯ್ಯ, ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net