

ಕೂಡಲಸಂಗಮ: ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಜಾತ್ರೆ ಅಂಗವಾಗಿ ಏ.18ರಂದು ಸಂಜೆ 5.30ಕ್ಕೆ ಸಂಗಮೇಶ್ವರ ರಥೋತ್ಸವ ಜರುಗಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗಮೇಶ್ವರ ರಥ, ಬಂಗಾರದ ಕಳಸಕ್ಕೆ 300 ವರ್ಷಗಳ ಇತಿಹಾಸ ಇದೆ. ರಥಗಳ ನವೀಕರಣ, ಕಲಶಕ್ಕೆ ಬಂಗಾರ ಲೇಪನ ಮಾಡಬೇಕು ಎಂಬುದು ಹಲವು ದಶಕಗಳಿಂದ ಭಕ್ತರ ಬೇಡಿಕೆಯಾಗಿತ್ತು. ಈ ವರ್ಷ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಜತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಶೇಷ ಅನುಮತಿಯನ್ನು ಪಡೆದು 28 ಲಕ್ಷ ರೂ. ವೆಚ್ಚದಲ್ಲಿ ರಥಗಳ ನವೀಕರಣ ಯೋಜನೆ ಆರಂಭಿಸಲಾಗಿತ್ತು. ಆಧುನಿಕ ತಂತ್ರಜ್ಞಾನದೊಂದಿಗೆ ಸಂಗಮೇಶ್ವರ ರಥ ನವೀಕರಣಗೊಂಡಿದ್ದು, ಹುಚ್ಚಯ್ಯನ ರಥವನ್ನು ಜಾತ್ರೆಯ ನಂತರ ನವೀಕರಣ ಮಾಡಲಾಗುವುದು ಎಂದರು.
ಜಿಲ್ಲಾ ಖಜಾನೆಯಲ್ಲಿ ಇರುವ ಬಂಗಾರ ಕಲಶ ವರ್ಷಕ್ಕೆ ಒಂದು ಬಾರಿ ಭಕ್ತರ ದರ್ಶನಕ್ಕೆ ದೊರೆಯುವುದು. ಮಂಡಳಿಯ ಆಯುಕ್ತರು ಬಾಗಲಕೋಟೆ ತಹಸೀಲ್ದಾರ್ ಅವರಿಂದ ಅನುಮತಿ ಪಡೆದು ವಿಶೇಷ ಭದ್ರತಾ ಪಡೆಯೊಂದಿಗೆ ಬಂಗಾರದ ಲೇಪನಕ್ಕೆ ಕಾರ್ಯಕ್ಕೆ ಕೂಡಲಸಂಗಮಕ್ಕೆ ತರಲಾಗಿತ್ತು. ಮಂಡಳಿಯ ಕಾರ್ಯಾಲಯದಲ್ಲಿ ನಾಲ್ಕು ದಿನಗಳ ಕಾಲ ಲೇಪನ ಕಾರ್ಯ ಮುಗಿಸಿ, ವಿಶೇಷ ಅಭಿಷೇಕ ಮಾಡಿ ಗುರುವಾರ ಬೆಳಗ್ಗೆ ಮರಳಿ ಬಾಗಲಕೋಟೆ ತಹಸೀಲ್ದಾರ್‌ಗೆ ಒಪ್ಪಿಸಲಾಗಿದ್ದು, ಪುನಃ ಬಾಗಲಕೋಟೆಯಿಂದ ಪಾದಯಾತ್ರೆ ಮೂಲಕ ಶುಕ್ರವಾರ ಬೆಳಗ್ಗೆ ಕೂಡಲಸಂಗಮಕ್ಕೆ ತರಲಾಗುವುದು ಎಂದರು.
ಸಂಗಮೇಶ್ವರನಿಗೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಬಂಗಾರ 615.650 ಗ್ರಾಂ ಮಂಡಳಿಯಲ್ಲಿ ಇತ್ತು. ಇದೇ ಬಂಗಾರವನ್ನು ಬಳಸಿಕೊಂಡು 491.340 ಗ್ರಾಂನಲ್ಲಿ ಲೇಪನ ಕಾರ್ಯವನ್ನು ಬೆಂಗಳೂರಿನ ಸಿಎಂಬಿ ಪ್ಲಾಟಿಂಗ್ ಮತ್ತು ಮೆಟಲ್ ಫಿನಿಶ್‌ರ ಕಂಪನಿ ಸಿಬ್ಬಂದಿ ಮಾಡಿದ್ದಾರೆ.
ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಜಾತ್ರೆಗೆ ವಿಶೇಷ ರಥ, ಲೇಪನಗೊಂಡ ಕಳಸ ಇರುವುದು ವಿಶೇಷ. ಭಕ್ತರು ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯಬೇಕು ಎಂದರು.
ಮಂಡಳಿಯ ಆಯುಕ್ತ ಮಹಾದೇವ ಮುರಗಿ, ಮುಖಂಡರಾದ ಮಹಾಂತೇಶ ನರಗುಂದ, ಶೇಖರಗೌಡ ಗೌಡರ, ಗಂಗಾಧರ ದೊಡಮನಿ, ಮುತ್ತಣ್ಣ ಕುರಿ ಮತ್ತಿತರರಿದ್ದಾರೆ.