ಇಂದು ಶ್ರೀವಿಶ್ವೇಶತೀರ್ಥರ ಸಂಸ್ಮರಣೆ: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜನೆ

Pejawar Shree 8 jan 20
Published on

ಬೆಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಬೃಂದಾವನ ಪ್ರತಿಷ್ಠಾಪನಾಂಗ ಆರಾಧನೆ ಹಾಗೂ ಗುರುಸಂಸ್ಮರಣೆ ಕಾರ್ಯಕ್ರಮ ಬುಧವಾರ (ಜ.8) ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೆರವೇರಲಿದೆ.

ಬೆಳಗ್ಗೆ 10 ಗಂಟೆಯಿಂದ ಸತತ ವೇದ ಪಾರಾಯಣ ಹಾಗೂ ಗೀತಾ ಪಾರಾಯಣ ನಡೆಯಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಗುರುಸಂಸ್ಮರಣೆ ಅಂಗವಾಗಿ ಪ್ರಸಿದ್ಧ ವಿದ್ಯಾಂಸ ಮಾಹುಲಿ ವಿದ್ಯಾಸಿಂಹಾಚಾರ್ಯ ಹಾಗೂ ಹಲವು ವಿದ್ವಾಂಸರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವಿರಲಿದೆ ಎಂದು ಶ್ರೀಪೇಜಾವರ ಮಠದ ವಿದ್ವಾಂಸ ಪ್ರೊ. ಎ. ಹರಿದಾಸ ಭಟ್ಟ ತಿಳಿಸಿದ್ದಾರೆ.

ಯತಿಗಳ ಸಮಾವೇಶ: ಗುರುವಾರ (ಜ.9) ಶ್ರೀವಿಶ್ವೇಶತೀರ್ಥ ಸಭಾಮಂಟಪದಲ್ಲಿ ಬೆಳಗ್ಗಿನಿಂದಲೇ ಹೋಮ, ಪಾರಾಯಣ, ಭಜನೆ, ಶ್ರೀ ರಾಮವಿಠಲದೇವರ ಪೂಜೆ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಯತಿಗಳ ಸಮಾವೇಶ ನಡೆಯಲಿದೆ.

ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀತೀರ್ಥ ಶ್ರೀಪಾದರು ಹಾಗೂ ಭೀಮಸೇತುಮುನಿವೃಂದ ಮಠದ ರಘುವರೇಂದ್ರ ಶ್ರೀಪಾದರು ಕಾರ್ಯಕ್ರಮ ಸಾನ್ನಿಧ್ಯ ವಹಿಸಲಿದ್ದಾರೆ. ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರ ಉಪನ್ಯಾಸವಿರಲಿದೆ.

ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ. ಎಚ್. ಸತ್ಯನಾರಾಯಣ ಚಾರ್ಯ , ಸಂಶೋಧನ ಮಂದಿರದ ನಿರ್ದೇಶಕ ಡಾ. ಎ.ವಿ. ನಾಗಸಂಪಿಗೆ, ವಿ. ಶ್ರೀರಾಮವಿಠ್ಠಲಾಚಾರ್ಯ ಪಾಲ್ಗೊಳ್ಳಲಿದ್ದಾರೆ.

ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗಿನ ಯತಿಗಳ ಸಮಾವೇಶದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಸೇರಿ ಇನ್ನಿತರ ಮಠಗಳ ಶ್ರೀಗಳು ಭಾಗಿಯಾಗಲಿದ್ದಾರೆ. ಮಂತ್ರಾಲಯ ಗುರುಸಾರ್ವಭೌಮ ವಿದ್ಯಾಪೀಠದ ಡಾ.ವಾದಿರಾಜಾಚಾರ್ಯ ಅವರ ಉಪನ್ಯಾಸವಿದೆ.

10 ಸಾವಿರ ಜನ ನಿರೀಕ್ಷೆ

ಗುರುವಾರ ಹಾಗೂ 11 ರಂದು ನಡೆಯುವ ಯತಿ ಸಮಾವೇಶ ಹಾಗೂ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುವಂದನಾ ಕಾರ್ಯಕ್ರಮಕ್ಕೆ ನಗರ, ಹೊರವಲಯ, ವಿವಿಧ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಮಂದಿ ನಿರೀಕ್ಷೆ ಇದೆ ಎಂದು ಪ್ರೊ. ಹರಿದಾಸ ಭಟ್ಟ ಮಾಹಿತಿ ನೀಡಿದ್ದಾರೆ. ಅದೇ ದಿನ ವಿವಿಧೆಡೆ ಅನ್ನಸಂತರ್ಪಣೆ ನಡೆಯಲಿದೆ. ಗುರು ಸಂಸ್ಮರಣಾ ಅಂಗವಾಗಿ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಧ್ಯಾಹ್ನ ಹಸ್ತೋದಕ ಮತ್ತು ತೀರ್ಥಪ್ರಸಾದ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜಾಲಹಳ್ಳಿ ಕೊಳೆಗೇರಿ ಪ್ರದೇಶದ ಬಡವರಿಗೆ ಊಟದ ವ್ಯವಸ್ಥೆ ಸೇರಿ ಹಲವು ಕಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ವೃಂದಾವನಕ್ಕೆ ಮಂಗಳವಾರ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭೇಟಿ ನೀಡಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವೃಂದಾವನಕ್ಕೆ ಭೇಟಿ ನೀಡುವ ಮುನ್ನ ವಿದ್ಯಾಪೀಠದ ಆವರಣದಲ್ಲಿರುವ ಕೃಷ್ಣ, ಮಧ್ವಾಚಾರ್ಯ, ರಾಘವೇಂದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

11ರಂದು ಜಯನಗರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ

ಶನಿವಾರ (ಜ.11) ಬೆಳಗಿನಿಂದ ಸಂಜೆಯವರೆಗೂ ಜಯನಗರ ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಿಸಲಾಗುವುದು. ಸಂಜೆ 4 ರಿಂದ 8 ಗಂಟೆಯವರೆಗೆ ಶ್ರೀಗಳಿಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ಗೌರವ ಕಾರ್ಯದರ್ಶಿ ವಿ.ಯು.ಕೇಶವಾಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net