ಚಾಮುಂಡಿ ಆದಾಯ ಖೋತಾ

photo-91-172642-1
Published on

ಮೈಸೂರು: ಧಾರ್ಮಿಕ, ಪ್ರವಾಸಿ ತಾಣವಾದ ಚಾಮುಂಡಿಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇಗುಲಕ್ಕೆ ಬರುವ ಎಲ್ಲ ಆದಾಯವೂ ಕಳೆದ ಎರಡು ತಿಂಗಳಿಂದ ನಿಂತುಹೋಗಿದ್ದು, ಇದು ಕೂಡ ನಷ್ಟಕ್ಕೆ ಸಿಲುಕಿದೆ..!

ಕರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲ ದೇವಾಲಯಗಳಂತೆ ಚಾಮುಂಡಿ ದೇವಸ್ಥಾನ ಕೂಡ ಸಾರ್ವಜನಿಕರ ಪಾಲಿಗೆ ಬಂದ್ ಆಗಿದ್ದು, ಭಕ್ತರ ಪ್ರವೇಶ ನಿಷಿದ್ಧವಾಗಿದೆ. ಬರೋಬ್ಬರಿ 64 ದಿನಗಳಿಂದ ಭಕ್ತರಿಗೆ ದೇವರ ದರ್ಶನಭಾಗ್ಯ ದೊರೆತಿಲ್ಲ. ಈ ರೀತಿ ಆಗಿರುವುದು ದೇವಸ್ಥಾನದ ಇತಿಹಾಸದಲ್ಲೇ ಮೊದಲು ಎನಿಸಿದೆ.

ಜನರ ಆಗಮನಕ್ಕೆ ನಿರ್ಬಂಧ ಹೇರಿದ ಬೆನ್ನಹಿಂದೆಯೇ ದೇವಸ್ಥಾನಕ್ಕೆ ಬರುವ ಹಣವೂ ಸ್ಥಗಿತಗೊಂಡಿದ್ದು, ಕೋಟ್ಯಂತರ ರೂ. ಆದಾಯ ಖೋತಾ ಆಗಿದೆ. ರಾಜ್ಯದ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿರುವ ಈ ದೇಗುಲಕ್ಕೆ ವಾರ್ಷಿಕವಾಗಿ 33 ಕೋಟಿ ರೂ. ಆದಾಯದ ಆವಕವಾಗುತ್ತದೆ. 2020-21ನೇ ಆರ್ಥಿಕ ವರ್ಷ ಪ್ರಾರಂಭದಿಂದಲೂ ನಯಾಪೈಸ ಆದಾಯ ಬಂದಿಲ್ಲ. ಹೀಗಾಗಿ, ಈ ವರ್ಷದ ಒಟ್ಟಾರೆ ಆದಾಯದಲ್ಲೂ ಕುಸಿತವಾಗುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದರೂ ದೇವಸ್ಥಾನದ ನಿರ್ವಹಣೆಗೆ ಯಾವುದೇ ಭಂಗವಾಗಿಲ್ಲ. ಸಿಬ್ಬಂದಿ, ಅರ್ಚಕರಿಗೆ ವೇತನ ಸೇರಿ ಇನ್ನಿತರ ಖರ್ಚು- ವೆಚ್ಚಗಳನ್ನು ಸರಿದೂಗಿಸಲು ಸಮಸ್ಯೆಯಾಗಿಲ್ಲ. ಈ ಹಿಂದಿನ ಆದಾಯದ ಹಣದಲ್ಲೇ ಎಲ್ಲವನ್ನೂ ನಿಭಾಯಿಸಲಾಗುತ್ತಿದೆ.

ಆದಾಯ ಮೂಲಗಳು ಯಾವುವು?
ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಈ ದೇವಸ್ಥಾನಕ್ಕೆ 26 ಮೂಲಗಳಿಂದ ಆದಾಯ ಹರಿದು ಬರಲಿದೆ. ಹುಂಡಿ ಹಣ, ಪ್ರವೇಶ ಶುಲ್ಕ, ಡಿಡಿ, ಮನಿ ಆರ್ಡರ್ ಮೂಲಕ ಬರುವ ಕಾಣಿಕೆ, ದೇಗುಲದ ವಿವಿಧ ಗುತ್ತಿಗೆ ಹಣ, ಲಾಡು ಪ್ರಸಾದ ಮಾರಾಟ, ವಿವಿಧ ಸೇವಾರ್ಥಗಳು, ಸೀರೆಗಳ ಹರಾಜು, ವಿಶೇಷ ಪೂಜೆ, ಅತಿಥಿಗೃಹ ಬಾಡಿಗೆ, ದಾಸೋಹ ಭವನದ ಸೇವಾ ಕಾಣಿಕೆ, ಇ-ಸೇವೆ, ಮಳಿಗೆ ಬಾಡಿಗೆ ಸೇರಿ ಇನ್ನಿತರ ಮೂಲಗಳಿಂದ ಆದಾಯ ಸಂಗ್ರಹವಾಗುತ್ತಿದೆ.


ಈ ಪೈಕಿ ಹುಂಡಿ (ಗೋಲಕ) ಗಳಿಂದ ಬಂದ ಆದಾಯದ್ದೇ ಸಿಂಹಪಾಲು. ನೇರ ಪ್ರವೇಶ ಶುಲ್ಕ, ಲಾಡು ಪ್ರಸಾದದ ಮಾರಾಟ, ವಿಶೇಷ ಪ್ರವೇಶ ಶುಲ್ಕದಿಂದ (30 ರೂ.ಪ್ರವೇಶ), ಸೀರೆ ಹರಾಜು, ದಾಸೋಹ ಭವನದ ಸೇವಾ ಕಾಣಿಕೆ, ವಿವಿಧ ಸೇವಾರ್ಥಗಳಿಂದ ಕೋಟಿಗಟ್ಟಲೇ ಆದಾಯ ಬರುತ್ತದೆ. ಉಳಿದ ಮೂಲಗಳಿಂದ ಲಕ್ಷಾಂತರ ರೂ. ಆದಾಯ ಬರುತ್ತದೆ. ದೇಗುಲದ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 81.78 ಕೋಟಿ ರೂ. ಠೇವಣಿ ಇಡಲಾಗಿದೆ. ಅದರ ಮೇಲಿನ ಬಡ್ಡಿಯಿಂದಲೂ ಲಕ್ಷಗಟ್ಟಲೇ ಆದಾಯದ ಒಳಹರಿವು ಇದೆ.

18 ದೇಗಲುಗಳದ್ದು ಇದೇ ಕಥೆ: ಶ್ರೀ ಚಾಮುಂಡೇಶ್ವರಿ ಬೆಟ್ಟ ಸಮೂಹ ದೇವಾಲಯಗಳ ಅಡಿಯಲ್ಲಿ ಬೆಟ್ಟದ ಚಾಮುಂಡಿ ದೇಗುಲ ಸೇರಿ ಮಹಾಬಲೇಶ್ವರ, ಉತ್ತನಹಳ್ಳಿ ತ್ರಿಪುರ ಸುಂದರಿ ಜ್ವಾಲಾಮುಖಿ, ಮೈಸೂರು ಅರಮನೆ ಆವರಣದ ಎಲ್ಲ ದೇವಾಲಯಗಳು ಸೇರಿದಂತೆ 18 ದೇವಾಲಯಗಳಿವೆ. ಇವುಗಳಿಗೂ ಆದಾಯ ಬರುತ್ತಿಲ್ಲ. ಈ ಸಮೂಹ ದೇವಾಲಯಗಳಲ್ಲಿ 220 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೇತನಕ್ಕೆ ದೊಡ್ಡ ಮೊತ್ತದ ಹಣ ಖರ್ಚಾಗುತ್ತದೆ.

ವ್ಯಾಪಾರಿಗಳಿಗೂ ನಷ್ಟ: ಚಾಮುಂಡಿ ದೇವಸ್ಥಾನ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಅನೇಕರಿಗೆ ಆದಾಯ ತಂದುಕೊಡುತ್ತದೆ. ಬೆಟ್ಟದಲ್ಲಿರುವ ವ್ಯಾಪಾರಿಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಹಣ್ಣು-ಹೂವು, ಪೂಜಾ ಸಾಮಗ್ರಿ, ಆಟಿಕೆ ಇನ್ನಿತರ ವಸ್ತುಗಳನ್ನು ಮಾರುವವರಿಗೂ ವ್ಯಾಪಾರವಿಲ್ಲದಾಗಿದ್ದು, 2 ತಿಂಗಳಿಂದ ಕೆಲಸವಿಲ್ಲದೆ ಇವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದಾಯದಲ್ಲಿ ಏರಿಕೆ: ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯದಲ್ಲಿ ಏರಿಕೆ ಕಂಡು ಬರುತ್ತಿದೆ. 2014-15ರಲ್ಲಿ 18.33 ಕೋಟಿ ರೂ., 2015-16ರಲ್ಲಿ 21.74 ಕೋಟಿ ರೂ., 2016-17ರಲ್ಲಿ 24.09 ಕೋಟಿ ರೂ., 2017-18ರಲ್ಲಿ 29.95 ಕೋಟಿ ರೂ., 2018-19ರಲ್ಲಿ 33.30 ಕೋಟಿ ರೂ. ಬಂದಿದ್ದು ಕಳೆದ ವರ್ಷ 2019-20ರಲ್ಲಿ 33 ಕೋಟಿ ರೂ. ಹರಿದು ಬಂದಿದೆ. ಪ್ರಸ್ತಕ ಸಾಲಿನಲ್ಲಿ ಆದಾಯ ಇಳಿಕೆಯಾಗಲಿದೆ. ದೇವಸ್ಥಾನದ ಹೆಸರಿನಲ್ಲಿ ಕೋಟ್ಯಂತರ ರೂ. ಬ್ಯಾಂಕ್ ಠೇವಣಿಯಿದೆ. 2015-16ರಲ್ಲಿ 86.49 ಕೋಟಿ ರೂ. ಇತ್ತು. ಅದರ ಮಾರನೇ ವರ್ಷವಾದ 2016-17ರಲ್ಲಿ 103.20 ಕೋಟಿ ರೂ.ಗೆ ತಲುಪಿತ್ತು. ಬಳಿಕ ಅದು 2018-18ರಲ್ಲಿ 78.19 ಕೋಟಿ ರೂ. ಮತ್ತು 2018-19ರಲ್ಲಿ 81.78 ಕೋಟಿ ರೂ.ಗೆ ಇಳಿದಿದೆ.

ಭಕ್ತರ ಪ್ರವೇಶ ನಿರ್ಬಂಧದ ನಡುವೆಯೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬೆಳಗ್ಗೆ 5.30ಕ್ಕೆ ದೇಗುಲದ ಮಹಾದ್ವಾರ ತೆಗೆದು ಶುದ್ಧೀಕರಣ ಮಾಡಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಪಂಚಾಮೃತಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಗುತ್ತಿದೆ. ಹೂವಿನಿಂದ ಅಲಂಕರಿಸಿ ಮಹಾಮಂಗಳಾರತಿ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.

ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲ ಮೂಲದ ಆದಾಯ ನಿಂತಿದೆ. ಆದರೆ, ನಿರ್ವಹಣೆ ಏನೂ ಸಮಸ್ಯೆಯಾಗಿಲ್ಲ. ಸಿಬ್ಬಂದಿ ವೇತನ ನೀಡುವಲ್ಲಿ ತೊಂದರೆಯಾಗಿಲ್ಲ.
ಯತಿರಾಜ್, ಮುಜರಾಯಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net