ಇಂದು ಈದ್ ಹಬ್ಬ ಆಚರಣೆ

DSC_0328
Published on

ಮೈಸೂರು: ಮುಸ್ಲಿಮರ ರಂಜಾನ್ ತಿಂಗಳ ಉಪವಾಸ ಭಾನುವಾರ ಕೊನೆಗೊಂಡಿದ್ದು, ಮೇ 25ರಂದು ಈದ್ ಉಲ್ ಫಿತ್ರ್ ಆಚರಣೆ ಮಾಡಲಾಗುತ್ತದೆ.

ಸರ್ಖಾಜಿ ಮೊಹಮ್ಮದ್ ಉಸ್ಮಾನ್ ಷರೀಫ್ ಅಧ್ಯಕ್ಷತೆಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಚಂದ್ರದರ್ಶನ ಸಮಿತಿ ಸಭೆ ಬಳಿಕ ಈದ್ ಉಲ್ ಫಿತ್ರ್ ಸೋಮವಾರ ಆಚರಿಸಲು ತೀರ್ಮಾನಿಸಲಾಗಿದೆ. ಶನಿವಾರ ಎಲ್ಲೂ ಚಂದ್ರ ದರ್ಶನ ಆಗಿಲ್ಲ. ಆದ್ದರಿಂದ ರಂಜಾನ್ ತಿಂಗಳ ಕೊನೆಯ ಉಪವಾಸ ಭಾನುವಾರ ನೆರವೇರಿತು. ಹಬ್ಬದ ಆಚರಣೆ ಮೇ 25ರಂದು ನಡೆಯಲಿದೆ ಎಂದು ಸರ್ಖಾಜಿ ತಿಳಿಸಿದರು.

ಸರಳ ಆಚರಣೆ: ಕರೊನಾ ಆತಂಕ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕ ಮುಸ್ಲಿಮರು ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಹೊಸ ಉಡುಪು ಖರೀದಿಸಿಲ್ಲ. ಆದ್ದರಿಂದ ಬಟ್ಟೆ ಅಂಗಡಿ, ಫ್ಯಾನ್ಸಿ ಸ್ಟೋರ್‌ಗಳಲ್ಲಿ ವ್ಯಾಪಾರ ಕಂಡು ಬರಲಿಲ್ಲ. ಹಬ್ಬದ ಮುನ್ನಾ ದಿನ ಭಾನುವಾರ ಜಾರಿಯಾದ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟಿಗೂ ಅವಕಾಶ ಸಿಗಲಿಲ್ಲ. ಹಬ್ಬದ ಖರೀದಿಗೆ ಪ್ರಮುಖ ತಾಣ ಎನಿಸಿರುವ ಮೀನಾ ಬಜಾರ್‌ನ ವ್ಯಾಪಾರಿಗಳು ಅಂಗಡಿಯನ್ನು ತೆರೆಯಲಿಲ್ಲ. ಆದ್ದರಿಂದ ಪ್ರತಿ ವರ್ಷವೂ ಇಲ್ಲಿ ಕಂಡುಬರುತ್ತಿದ್ದ ವ್ಯಾಪಾರ ಈ ಬಾರಿ ಇರಲಿಲ್ಲ.

ಶನಿವಾರವೇ ಕೆಲ ಮಹಿಳೆಯರು ಮತ್ತು ಮಕ್ಕಳು ಸಯ್ಯಜಿರಾವ್ ರಸ್ತೆ, ಸಂತೆಪೇಟೆ, ದೇವರಾಜ ಅರಸು ರಸ್ತೆಯಲ್ಲಿರುವ ಅಂಗಡಿಗಳಿಂದ ಉಡುಪು, ಪಾದರಕ್ಷೆ, ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದರು. ಹಬ್ಬಕ್ಕೆ ಅಗತ್ಯವಿರುವ ದಿನಸಿ ಸಾಮಗ್ರಿಗಳ ಖರೀದಿಯನ್ನೂ ಅಂದೇ ಮಾಡಿದ್ದರು.

ಮನೆಯಲ್ಲೇ ಆಚರಣೆ: ಮಸೀದಿಗಳಲ್ಲಿ ರಂಜಾನ್ ತಿಂಗಳ ಸಾಮೂಹಿಕ ಪ್ರಾರ್ಥನೆ ನಡೆಯಲಿಲ್ಲ. ಸಾಮೂಹಿಕ ಇಫ್ತಾರ್ ಕೂಡಾ ಆಯೋಜನೆ ಮಾಡದೆ ಎಲ್ಲರೂ ಲಾಕ್‌ಡೌನ್ ನಿಯಮವನ್ನು ಪಾಲಿಸಿದ್ದಾರೆ. ಅಂತೆಯೇ ಈದ್ ಹಬ್ಬವನ್ನು ಕೂಡ ಮನೆಗಳಲ್ಲಿ ಆಚರಿಸಬೇಕು ಎಂದು ಮೊಹಮ್ಮದ್ ಉಸ್ಮಾನ್ ಷರೀಫ್ ವಿನಂತಿಸಿದ್ದಾರೆ.

ಮುಸ್ಲಿಮರು ಪ್ರತಿ ವರ್ಷ ಮಸೀದಿ ಮತ್ತು ಈದ್ಗಾಗಳಲ್ಲಿ ಈದ್ ನಮಾಜ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಬಾರಿ ತಮ್ಮ ತಮ್ಮ ಮನೆಯಲ್ಲೇ ಈದ್ ನಮಾಜ್ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net