

ವಿಜಯವಾಣಿ ಸುದ್ದಿಜಾಲ ಆರ್ಡಿ
ಆರ್ಡಿಯ ಕೊಳ್ಕೆಬೈಲು ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಏ.13ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮಗಳ ವಿವರ: 13ರಂದು ಬೆಳಗ್ಗೆ 9 ರಿಂದ ಗುರು ಗಣಪತಿ ಪೂಜೆ, ಪುಣ್ಯಹ ವಾಚನ, ಮಹಾಸಂಕಲ್ಪ, ಉಮಾಮಹೇಶ್ವರ ದೇವರಿಗೆ ಪಂಚವಿಶಂತಿ ದ್ರವ್ಯ ಕಲಶ ಪ್ರತಿಷ್ಠಾಪನೆ, ಪುರಸ್ಸರ ಕಲಾತತ್ವ ಹೋಮ, ಗಣಪತಿ ಹಾಗೂ ನಾಗದೇವರಿಗೆ ನವಕ ಪ್ರಧಾನ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದೆ. ಸಂಜೆ 7ರಿಂದ ಮಹಾ ರಂಗಪೂಜೆ, ರಾತ್ರಿ 9 ಗಂಟೆಯಿಂದ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಹಾಮಂತ್ರಿ ದುಷ್ಟಬುದ್ಧಿ ಕಾಲಮಿತಿ ಯಕ್ಷಗಾನ ನಡೆಯಲಿದೆ.
ಕ್ಷೇತ್ರದ ಹಿನ್ನೆಲೆ: ದೇವಸ್ಥಾನವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ಜೈನರಾಜ ವಂಶಸ್ಥರು ಇಲ್ಲಿ ದೇವಳವನ್ನು ನಿರ್ಮಾಣ ಮಾಡಿರುವುದಾಗಿಯೂ, ಇದಕ್ಕೆ ಕೊಲ್ಲೂರಿನಿಂದ ಶೃಂಗೇರಿಗೆ ಪ್ರಯಾಣಿಸುತ್ತಿದ್ದ ಶ್ರೀ ಶಂಕರಾರ್ಚಾಯರು ಹಾಗೂ ಅವರ ಶಿಷ್ಯರು ಪ್ರೇರಣೆ ನೀಡಿದ್ದರೆಂದು ತಿಳಿದು ಬಂದಿದೆ. ಅಲ್ಲದೆ ಈ ದೇವಾಲಯದಲ್ಲಿ ಉಮಾ (ಪಾರ್ವತಿ) ಮಹೇಶ್ವರ, ಗಣಪತಿ, ನಾಗ ಹೀಗೆ ನಾಲ್ಕು ಚೈತನ್ಯಗಳ ಆರಾಧನೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮುಂದೆ ಈ ದೇವಳವು ಊರ_ಪರವೂರ ಭಕ್ತರ ಸಹಕಾರದಿಂದಲೂ ಆಡಳಿತ ನಡೆಸುವ ಜೈನರಾಜ ವಂಶಸ್ಥರ ಪ್ರೋತ್ಸಾಹದಿಂದ ಅಭಿವೃದ್ಧಿ ಹೊಂದಿತ್ತು. ನಂತರದ ದಿನಗಳಲ್ಲಿ ಕಾಲಕ್ಕನುಗುಣವಾಗಿ ಕರ್ಮದೋಷದಿಂದ ಈ ದೇವಳವು ಅವನತಿಯತ್ತ ಸಾಗಿ ಸಂಪೂರ್ಣ ನಾಶ ಹೊಂದಿ, ಇಲ್ಲಿದ್ದ ಾರೀ ಸಂಪತ್ತು ದರೋಡೆಗಾರರ ವಶವಾಗಿದೆ ಎಂದು ಹೇಳಲಾಗುತ್ತದೆ.
ಶೇಡಿಮನೆ ಗ್ರಾಮದ ಕುದ್ರುಬೀಡು ಕೊಳ್ಕೆಬೈಲು ಎಂಬಲ್ಲಿ ಮಡಾಮಕ್ಕಿ, ಶೇಡಿಮನೆ, ಅಲ್ಬಾಡಿ ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಿದರು. ಊರ ಪರವೂರ ಭಕ್ತರ ಸಹಕಾರದೊಂದಿಗೆ ಯಡ್ದೆ ದೊಡ್ಡಮನೆ ಕುಟುಂಬಸ್ಥರು ಶಿವಪುರ ಹಾಗೂ ಜಲಜಮ್ಮ ಶೆಡ್ತಿ ಮತ್ತು ಮಕ್ಕಳು ಬ್ರಾಂಬ್ರಬೆಟ್ಟು (ಬ್ರಾಹ್ಮಣರಬೆಟ್ಟು) ನೀಡಿದ ಸ್ಥಳದಲ್ಲಿ ನೂತನ ಶಿಲಾಮಯ ದೇವಳ ನಿರ್ಮಾಣಗೊಂಡು 2015ರ ಏಪ್ರಿಲ್‌ನಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿದೆ.