

ಗದಗ: ನವರಾತ್ರಿ ಹಿನ್ನೆಲೆ ಜಿಲ್ಲೆಯ ರೋಣ ತಾಲೂಕಿನ ಗುಳಗುಂದಿ ಗ್ರಾಮದಲ್ಲಿ ಅ.5ರಂದು ನಮ್ಮೂರ ಪರ್ವ ಆಚರಿಸಲಾಗುತ್ತಿದೆ.
ಹಲವು ವರ್ಷಗಳಿಂದ ಗ್ರಾಮದಲ್ಲಿ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮಸ್ಥರು ಇದಕ್ಕೆ ನಮ್ಮೂರ ಪರ್ವ ಎಂದೇ ಕರೆಯುತ್ತಾರೆ. ಹಿಂಗಾರು ಬಿತ್ತನೆಗೆ ಮುಂಚೆ ಪೂಜೆ ಸಲ್ಲಿಸುವುದು, ನೈವೇದ್ಯ ಅರ್ಪಿಸುವುದು ಈ ಹಬ್ಬದ ವಿಶೇಷವಾಗಿದೆ. ಉತ್ತರಿ ಮಳೆ ಹಾಗೂ ಹಸ್ತ ಮಳೆ ಕೂಡಿದಾಗ ಈ ಹಬ್ಬ ಆಚರಿಸುವುದು ವಾಡಿಕೆ.
ಹಬ್ಬದ ನಿಮಿತ್ತ ಬಗೆ ಬಗೆಯ ಭಕ್ಷೃಗಳನ್ನು ಸಿದ್ಧಪಡಿಸಲಾಗುತ್ತದೆ. ಜೋಳದ ರೊಟ್ಟಿ, ಸಜ್ಜೆ, ಕಡುಬು, ಕರ್ಚಿಕಾಯಿ, ಎಣ್ಣೆಗಾಯಿ, ಹೋಳಿಗೆ ಮನೆಯಲ್ಲಿ ತಯಾರಿಸಿಕೊಂಡು ಅ.5ಂದು ಗ್ರಾಮದ ಭಕ್ತರು ಮಾರುತೇಶ್ವರ, ದುರ್ಗಾದೇವಿ ಪಲ್ಲಕ್ಕಿಯೊಂದಿಗೆ ಮಲಪ್ರಭಾ ನದಿಗೆ ಹೋಗಿ, ಅಲ್ಲಿ ಗಂಗೆ ಪೂಜೆ ನೆರವೇರಿಸುತ್ತಾರೆ. ನಂತರ ಗ್ರಾಮದೇವರಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ಗೋಪಾಳ ತುಂಬಿಸಿದ ನಂತರ ನೆಂಟರು, ಇಷ್ಟರೊಂದಿಗೆ ಭೋಜನ ಸವಿಯಲಾಗುತ್ತದೆ.