

ಮಾನವೀಯ ಸಂಬಂಧಗಳು ಹಳಸಿ ಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣವಾಗುತ್ತಿದೆ. ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ವೈದ್ಯ ರೋಗಿಯ ಪವಿತ್ರ ಸಂಬಂಧವೂ ಈಗ ಮೊದಲಿನಂತಿಲ್ಲ. ವೈದ್ಯರು ದೇವರು ಎಂಬ ಭಾವನೆ ಜನರಲ್ಲಿ ಮಾಯವಾಗುತ್ತಿದೆ, ವೈದ್ಯರನ್ನು ಮನುಷ್ಯರ ರಿತಿಯಲ್ಲಿ ನೋಡುವ ಜನರು ಕಡಿಮೆಯಾಗುತ್ತಿದ್ದಾರೆ. ವೈದ್ಯರು ಅಂದರೆ ರೋಗಿಯ ಜೀವ ಉಳಿಸುವವರು ಎಂಬ ಭಾವನೆಗಿಂತಲೂ ವೈದ್ಯರು ರಕ್ತ ಪಿಪಾಸುಗಳು, ಕಲ್ಲು ಹೃದಯದವರು ಮತ್ತು ವ್ಯಾಪಾರಿಗಳು ಎಂದು ಬಿಂಬಿಸುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವೈದ್ಯರು ಮಾಡಿದ ಒಳ್ಳೆಯ ಕೆಲಸವನ್ನು ಗುರುತಿಸುವ ಜನರು ಮಾಯವಾಗುತ್ತಿದ್ದಾರೆ. ಎಲ್ಲೋ ಒಬ್ಬ ವೈದ್ಯ ಅಚಾತುರ್ಯದಿಂದ ಮಾಡಿದ ಕೆಲಸವನ್ನು ವೈಭವೀಕರಿಸಿ, ಎಲ್ಲ ವೈದ್ಯರನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕೆಲಸವನ್ನು ಜನರು ಮತ್ತು ಮಾದ್ಯಮ ಎಗ್ಗಿಲ್ಲದೇ ಮಾಡುತ್ತಿದೆ. ಎಲ್ಲಾ ಪ್ರಮಾಣಿಕ ಪ್ರಯತ್ನದ ನಂತರವೂ, ವೈದ್ಯ ತಮ್ಮ ಎಲ್ಲಾ ಜ್ಞಾನ ಮತ್ತು ಕೌಶಲ್ಯ ಬಳಸಿ ರೋಗಿಯನ್ನು ಉಳಿಸಲು ಸಾಧ್ಯವಾಗದಿದ್ದಾಗ ವೈದ್ಯರನ್ನು ಹೊಣೆಗಾರನನ್ನಾಗಿ ಮಾಡಿ, ದಾಳಿ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು ಯಾವ ನ್ಯಾಯ ಎಂಬುದೇ ಅರಿಯದ ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ.
1882 ಜುಲೈ 1 ರಂದು ಭಾರತ ದೇಶ ಕಂಡ ಅಪ್ರತಿಮ ವೈದ್ಯ, ಪ್ರಾಮಾಣಿಕ ರಾಜಕಾರಣಿ, ಅಪ್ಪಟ ದೇಶ ಭಕ್ತ ಮತ್ತು ಮಹಾನ್ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ತಜ್ಞ ಡಾ. ಬಿದನ್ ಚಂದ್ರರಾಯ್ ಅವರ ಜನ್ಮದಿನ. ಈ ಮಹಾನ್ ಚೇತನದ ನೆನಪಿಗಾಗಿ, ದೇಶಾದ್ಯಂತ ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಿ, ವೈದ್ಯರು ತಮ್ಮ ವೃತ್ತಿ ಜೀವನದ ಏಳು ಬೀಳುಗಳತ್ತ ದೃಷ್ಟಿಹರಿಸಿ ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿಕೊಂಡು ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ ತನ್ನ ತನುಮನ ಧನಗಳನ್ನು ಮಗದೊಮ್ಮೆ ತಮ್ಮ ವೃತ್ತಿಗೆ ಸಮರ್ಪಿಸಿಕೊಳ್ಳುವ ವಿಶೇಷ ದಿನವಾಗಿರುತ್ತದೆ. ಸುಮಾರು 80 ವರ್ಷಗಳ ತುಂಬು ಜೀವನ ನಡೆಸಿ 1962 ಜುಲೈ 1ರಂದು ದೈವಾಧೀನರಾದರು. ಅವರ ಅಪ್ರತಿಮ ಸೇವೆಗಾಗಿ ಭಾರತ ಸರ್ಕಾರ 1961 ರಲ್ಲಿ ಭಾರತ ರತ್ನ ನೀಡಿ ಗೌರವಿಸಿತ್ತು. 1976ರಿಂದ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ. ರಾಯ್ ಪ್ರಶಸ್ತಿಯನ್ನು ಆರಂಭಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಲಾಯಿತು.
ನಮಗೆ ಸ್ವಾತಂತ್ರ ಲಭಿಸಿ 77 ವರ್ಷಗಳೇ ಕಳೆದಿದೆ. ಕಾಲ ಬದಲಾದಂತೆ ಜೀವನಶೈಲಿ, ಆಹಾರ ಪದ್ಧತಿ, ಪರಿಸರ ಮತ್ತು ಆದರ್ಶಗಳೂ ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತವಾದ ಕ್ರಾಂತಿಗಳು, ಅವಿಷ್ಕಾರಗಳು ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳೂ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವನಾತ್ಮಕ ಸಂಬಂಧಗಳು ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ವೃತ್ತಿಯಿರಲಿ, ಸಂಶೋಧನೆಗಳೇ ಇರಲಿ ಎಲ್ಲಾ ಕಡೆಯೂ ಧನ ಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲಿ ತೀವ್ರತರವಾದ ಸಂಶೋಧನೆಗಳೂ ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡಜನರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡಿರುವ ವೈದ್ಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯಬೇಕು. ರೋಗಿಗಳು ತಾಳ್ಮೆ, ಸಂಯಮ ಕಳೆದುಕೊಳ್ಳಬಾರದು. ನಿಮ್ಮ ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ಕೂಡ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆಗಳು, ವೈಯಕ್ತಿಕ ಸಮಸ್ಯೆಗಳು ಭಾವನೆಗಳು ಇರುತ್ತದೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ- ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಸ್ವಸ್ಥ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ.
ಕೊನೆ ಮಾತು
ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ನಾರಾಯಣನಾಗದಿದ್ದರೂ ಮನುಷ್ಯನಾಗುವುದಂತೂ ಸತ್ಯ. ಈ ರೀತಿ ತನ್ನ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಸೇವೆ ಮಾಡುತ್ತಿರುವ ಸಾವಿರಾರು ವೈದ್ಯರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ಹಾಕಿದ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಲಿ. ವೈದ್ಯರ ದಿನದಂದು ನನ್ನೆಲ್ಲಾ ವೈದ್ಯ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯ ಕೋರುತ್ತೇನೆ.
ಡಾ. ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು