

ಯಳಂದೂರು: ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮೇ 17ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಯೋಜಿಸಲಾಗಿದ್ದು, ತಾಲೂಕಿನ ಎಲ್ಲ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಉತ್ಸವದಲ್ಲಿ ಭಾಗವಹಿಸಬೇಕು ಎಂದು ಯರಿಯೂರು ಸಿ.ರಾಜಣ್ಣ ಮನವಿ ಮಾಡಿದರು.
ಹಲವು ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದ ಜಯಂತಿ ಆಚರಣೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ವರ್ಷ ಡಾ.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುವುದು. ಈಗಾಗಲೇ ತಾಲೂಕಿನ ಪ್ರತಿ ಗ್ರಾಮದ ದಲಿತ ಮುಖಂಡರು, ಯಜಮಾನರು, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡಿ ಆಮಂತ್ರಣ ನೀಡಲಾಗಿದ್ದು ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಿತಿಯ ಕೆಸ್ತೂರು ಸಿದ್ದರಾಜು ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ ವಹಿಸಲಿದ್ದಾರೆ. ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಎನ್.ಮಹೇಶ್, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಕೊಮಾರನಪುರ ಪುಟ್ಟರಾಜು, ಅಗರ ಲಿಂಗರಾಜು, ಯರಗಂಬಳ್ಳಿ ಮಲ್ಲು, ಗಂಗವಾಡಿ ನಾರಾಯಣ, ದುಗ್ಗಹಟ್ಟಿ ಮಾದೇಶ್, ರೇವಣ್ಣ, ನಂಜುಂಡಸ್ವಾಮಿ, ಉಮಾಶಂಕರ್, ಯರಿಯೂರು ಎನ್. ನಾಗೇಂದ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.