ಕೋಟ: ಬಾಳೆಬೆಟ್ಟು ಫ್ರೆಂಡ್ಸ್ ಹಾಗೂ ಕೋಟ ಭಗತ್‌ಸಿಂಗ್ ಯುವ ವೇದಿಕೆ ಆಶ್ರಯದಲ್ಲಿ ಏ.13ರಂದು ಇಲ್ಲಿನ ಡಾ.ಸತೀಶ್ ಪೂಜಾರಿ ವೇದಿಕೆಯಲ್ಲಿ ಸ್ಪರ್ಶ ಕಾರ್ಯಕ್ರಮ ಜರುಗಲಿದೆ ಎಂದು ಭಗತ್‌ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ ಹಾಗೂ ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಯಕ್ಷಗಾನ ಕಲಾವಿದ ಕೋಟ ಸುರೇಶ್ ಅವರಿಗೆ ಹುಟ್ಟೂರ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಶಂಕರ್ ಮಂಜೇಶ್ವರ, ಧಾರ್ಮಿಕ ಸೇವಕ ಆನಂದ ದೇವಾಡಿಗ ಕೋಟ, ಬಡಗಿ ಮಹಾಬಲ ಆಚಾರ್ಯ, ಕೃಷಿಕ ಶೇಖರ ಶೆಟ್ಟಿ, ಲಕ್ಷ್ಮೀ ಮಡಿವಾಳ್ತಿ, ಸಮಾಜ ಸೇವಕ ಚಂದ್ರ ಆಚಾರ್ಯ ಕೋಟ, ವಾದ್ಯಗೋಷ್ಠಿಯ ಜಾರ್ಜ್ ವಿಲ್ಸನ್, ದರ್ಜಿ ಪ್ರಭಾಕರ ಆಚಾರ್ಯ, ಕಂಬಳ ಕ್ಷೇತ್ರದ ರಮೇಶ್ ಪೂಜಾರಿ, ಕೃಷಿಕ ಸತೀಶ್ ಶೆಟ್ಟಿ, ರಕ್ತದಾನಿ ದಿನೇಶ್ ಕಾಂಚನ್, ಉರಗ ರಕ್ಷಕ ವಿಜಯ ಪೂಜಾರಿ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ.ಶಮಂತ್ ಕುಮಾರ್, ಡಾ.ಚೈತ್ರಾ ಭರತ್ ಶೆಟ್ಟಿ, ಡಾ.ಗಜೇಂದ್ರ ಗುಳ್ವಾಡಿ ಅವರನ್ನು ಗೌರವಿಸಲಾಗುವುದು. ಉಡುಪಿಯ ಪವರ್ ಮಹಿಳಾ ಸಂಘಟನೆ, ಕೋಡಿಯ ಪ್ರಗತಿ ಯುವಕ ಸಂಘಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಿವಾಜಿ ನಾಟಕ ಕನ್ನಡದಲ್ಲಿ ಪ್ರದರ್ಶನ ನಡೆಯಲಿದೆ ಎಂದರು. ಪದಾಧಿಕಾರಿಗಳಾದ ಚಂದ್ರ ಪೂಜಾರಿ, ಅಜಿತ್ ದೇವಾಡಿಗ, ಪಾಂಡು ಪೂಜಾರಿ ಇದ್ದರು.