

ಪಾಶ್ಚಾತ್ಯ ವಿಜ್ಞಾನ ಮತ್ತು ವೈದ್ಯಕೀಯ ಪದ್ಧತಿಯಲ್ಲಿ ಮನಃಶಾಸ್ತ್ರ ಕೆಲವು ಶತಮಾನಗಳಿಂದೀಚೆಗಷ್ಟೆ ಬೆಳೆದು ಬಂದ ಶಾಖೆಯಾದರೆ, ಭಾರತೀಯ ವ್ಯವಸ್ಥೆಯಲ್ಲಿ ಇದರ ಇತಿಹಾಸ ಮಹಾಭಾರತಕ್ಕಿಂತಲೂ ಪ್ರಾಚೀನ. ಅದರಲ್ಲೂ, ಮನಃಶಾಸ್ತ್ರದ ಪಿತಾಮಹ ಎಂದು ಯಾರನ್ನಾದರೂ ಹೆಸರಿಸುವುದಾದರೆ ಅದು ನಿಸ್ಸಂಶಯವಾಗಿ ಕೃಷ್ಣ ವಾಸುದೇವ.
| ವೀರನಾರಾಯಣ
ನಮ್ಮ ಕರ್ಮಮಾರ್ಗ, ಜ್ಞಾನ ಮತ್ತು ಭಕ್ತಿಮಾರ್ಗಗಳ ಎಲ್ಲ ಪ್ರಯತ್ನಗಳೂ, ಮುಕ್ತಿಗೆ ಅಡ್ಡಿಯಾಗಿರುವ ಮನಸ್ಸನ್ನು ನಿಗ್ರಹಿಸುವ ಅಥವಾ ಇಲ್ಲವಾಗಿಸುವ ಪ್ರಯತ್ನಗಳೇ ಆಗಿವೆ. ಸರ್ವ ಉಪನಿಷತ್ತುಗಳ ಸಾರ ಸಂಗ್ರಹ ಎನಿಸಿರುವ ಗೀತೆಯಲ್ಲಿ ಕೃಷ್ಣ ಇದನ್ನು ಹೆಚ್ಚು ಸ್ಪುಟವಾಗಿ ವಿಷದೀಕರಿಸುತ್ತಾನೆ.
ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ |
ಮನಸಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ ||
‘ಭೌತಿಕ ಶರೀರಕ್ಕಿಂತ ಇಂದ್ರಿಯಗಳು ವ್ಯಾಪಕ. ಇಂದ್ರಿಯಗಳಿಗಿಂತ ಮನಸ್ಸು ವ್ಯಾಪಕ. ಮನಸ್ಸಿನ ಆಚೆಗೆ ಬುದ್ಧಿ, ಹಾಗೂ ಬುದ್ಧಿಯ ಹೊರತಾಗಿ ಆತ್ಮ ಇದೆ’ ಎನ್ನುತ್ತಾನೆ ಕೃಷ್ಣ.
‘ಯುದ್ಧಭೂಮಿಯಲ್ಲಿ ತನ್ನ ಬಂಧು-ಬಾಂಧವರು, ಗುರುಹಿರಿಯರೇ ಎದುರಾಗಿರುವಾಗ ಹೇಗೆ ಹೋರಾಟ ಮಾಡಲಿ? ಭ್ರಮಾಧೀನ ಮನಸ್ಸನ್ನು ಯುದ್ಧೋತ್ಸಾಹಕ್ಕೆ ಹೇಗೆ ಸಜ್ಜುಗೊಳಿಸಲಿ?’ ಎಂದು ವಿಷಾದಭರಿತನಾಗಿ ಪ್ರಶ್ನಿಸುವ ಅರ್ಜುನನಿಗೆ ಕೃಷ್ಣ ನೀಡುವ ಉತ್ತರ ಸಾರ್ವಕಾಲಿಕ ಆದುದಕ್ಕೆ ಕಾರಣ, ಆತ ಮಾನಸಿಕತೆಯನ್ನು ವಿಶ್ಲೇಷಿಸುವ ರೀತಿಯಿಂದಾಗಿ.
ಅಸಲಿಗೆ ತನ್ನ ಬಂಧುಗಳನ್ನು ಅಥವಾ ಯಾರೊ ಒಬ್ಬರನ್ನು ಕೊಲ್ಲಬೇಕಲ್ಲ ಎಂಬ ವಿಚಾರವೇ ಅನುಚಿತ. ಯಾರೂ ಯಾರನ್ನೂ ಕೊಲ್ಲಲಾಗುವುದಿಲ್ಲ. ಆತ್ಮ ಎಂಬುದು ಅನಾದಿ, ಅನಂತ ಹಾಗೂ ಅವಿನಾಶಿ. ಭೌತಿಕ ಸ್ವರೂಪದಲ್ಲಿ ಕಾಣುವ ದೇಹವನ್ನು ಕೊಲ್ಲಬಹುದು. ಆದರೆ ಆತ್ಮ ಅವಿನಾಶಿ. ಅದು ಸದಾ ಇರುವಂಥದ್ದು- ಸದಾ ಶಿವ. ಅದನ್ನು ಕೊಲ್ಲಲಾಗದು ಎನ್ನುತ್ತಾನೆ ಕೃಷ್ಣ. ಅರ್ಜುನನ ಐಹಿಕ ಪ್ರಶ್ನೆಯೊಂದಕ್ಕೆ ಪಾರಮಾರ್ಥಿಕವೂ, ಪರಮೋಚ್ಚವೂ ಆದ ಉತ್ತರವನ್ನು ಕೊಡುತ್ತಾನೆ ಕೃಷ್ಣ.
ಅರ್ಜುನನಲ್ಲಿ ಇಂಥದೊಂದು ವಿಷಾದ, ಪ್ರಶ್ನೆ ಹುಟ್ಟಿರುವುದೇ ಮನೋವ್ಯಾಪಾರದಿಂದಾಗಿ. ಈ ಮನಸ್ಸನ್ನು ಸಂಯೋಗಗೊಳಿಸಿದಲ್ಲಿ, ‘ನಾನು ಯಾರು’ ಎಂಬ ಅರಿವು ಉಂಟಾಗುತ್ತದೆ. ಆ ಅರಿವಿನಲ್ಲಿ ಎಲ್ಲವೂ ವಿಲೀನವಾಗಿಬಿಡುತ್ತದೆ. ಈ ವಿಷಾದ, ಪ್ರಶ್ನೆ, ಗೊಂದಲಗಳೂ ಸಹ ಎನ್ನುತ್ತಾನೆ ಕೃಷ್ಣ.
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಂ |
ಅಭ್ಯಸೇನ ತು ಕೌಂತೇಯ ವೈರಾಗ್ಯೇನ ಚ ಗೃಹ್ಯತೇ ||
‘ಎಲೈ ಅರ್ಜುನ, ಮನಸ್ಸು ಚಂಚಲವೂ, ನಿಗ್ರಹಿಸಲು ಕಠಿಣವೂ ಆದುದು ಎಂಬುದರಲ್ಲಿ ಸಂಶಯವಿಲ್ಲ; ಆದರೆ ಅಭ್ಯಾಸದ ಮೂಲಕ ಹಾಗೂ ವೈರಾಗ್ಯದ ಮೂಲಕ ಇದನ್ನು ನಿಗ್ರಹಿಸಬಹುದು ಎನ್ನುತ್ತಾನೆ ಕೃಷ್ಣ. ಅಶ್ವಮೇಧಿಕ ಪರ್ವದಲ್ಲಿ ಯುಧಿಷ್ಠಿರನಿಗೆ ಕೃಷ್ಣ ಹೇಳುವ ಕಾಮಗೀತೆಯೂ ಮನಃಶಾಸ್ತ್ರದ ದೃಷ್ಟಿಯಿಂದ ಮಹತ್ವದ್ದಾಗಿದೆ. ಕಾಮ, ಮೋಹಾದಿ ಅರಿಷಡ್ವರ್ಗಗಳೂ ಮನೋವ್ಯಾಪಾರದ ಉಪ ಉತ್ಪನ್ನಗಳು. ಈ ಮನಸ್ಸೆಂಬುದು ಅತಿ ವಿಚಿತ್ರ. ಯಾವ ಆಯುಧದಿಂದ ಇದನ್ನು ನಿಯಂತ್ರಿಸಲು ತೊಡಗುತ್ತೀರೊ ಅದೇ ಆಯುಧಕ್ಕೆ ಮನಸ್ಸು ಜೋತುಬೀಳುತ್ತದೆ.
‘ದಾನ, ಔದಾರ್ಯಗಳಿಂದ ಇದನ್ನು ನಿಗ್ರಹಿಸಲು ಹೊರಟರೆ ದಾನ, ಔದಾರ್ಯಗಳ ಮೋಹಕ್ಕೆ ಮನಸ್ಸು ಒಳಗಾಗುತ್ತದೆ. ಸತ್ಯದಿಂದ ನಿಗ್ರಹಿಸಲು ಹೊರಟರೆ ಸತ್ಯದ ಮೋಹಕ್ಕೆ ಬೀಳುತ್ತದೆ; ಜ್ಞಾನದಿಂದ ನಿಗ್ರಹಿಸಲು ಹೊರಟರೆ ಜ್ಞಾನದ ಮೋಹಕ್ಕೆ ಕಟ್ಟುಬೀಳುತ್ತದೆ. ಹೀಗಾಗಿ ಎಲೈ ಯುಧಿಷ್ಠಿರ, ಕಾಮ, ಮೋಹಾದಿಗಳನ್ನು ನೀನು ಧರ್ಮದಿಂದ ನಿಗ್ರಹಿಸು. ಆಗ ಮನಸ್ಸು ಧರ್ಮಕ್ಕೆ ಜೋತುಬೀಳುತ್ತದೆ. ಅದು ಲೋಕಕಲ್ಯಾಣದ ದೃಷ್ಟಿಯಿಂದ ಒಳ್ಳೆಯದು. ಮನಸ್ಸನ್ನು ನಿಗ್ರಹಿಸುವ ವ್ಯರ್ಥಪ್ರಯತ್ನದ ಬದಲಿಗೆ ಅದನ್ನು ಧರ್ಮಕ್ಕೆ ಜೊತೆಯಾಗಿಸು’ ಎನ್ನುತ್ತಾನೆ ಕೃಷ್ಣ.
ಹೀಗೆ ಎಲ್ಲವನ್ನೂ ಒಳಗೊಳ್ಳುವ ಪೂರ್ಣತೆ ಮತ್ತು ಅಹಂನ ವ್ಯಾಪಕತೆ, ಅನಂತತೆಯಿಂದಾಗಿ ಕೃಷ್ಣ ಅರಿಯದ ಮನೋವ್ಯಾಪಾರವಿಲ್ಲ. ಕೃಷ್ಣನಿಗೆ ತಿಳಿಯದ ಮಾನಸಿಕತೆ ಇಲ್ಲ. ಅದು ದ್ರೌಪದಿಯ ಭಕ್ತಿಪರವಶತೆಯಾಗಲಿ, ಅರ್ಜುನನ ಶ್ರದ್ಧೆ, ದುರ್ಯೋಧನನ ತಂತ್ರಗಾರಿಕೆ, ಕರ್ಣನ ದೌರ್ಬಲ್ಯ, ಧೃತರಾಷ್ಟ್ರನ ಹವಣಿಕೆ, ಕುಂತಿಯ ಅಸಹಾಯಕತೆ, ಗಾಂಧಾರಿಯ ಅಸೂಯೆ ಕೊನೆಗೆ ತನ್ನ ದೇಹದ ಅವಸಾನಕ್ಕೆ ಕಾರಣನಾಗುವ ಬೇಟೆಗಾರನೊಬ್ಬನ ಅಪರಾಧಪ್ರಜ್ಞೆಯಾಗಲಿ ಎಲ್ಲವೂ ಕೃಷ್ಣನ ಮನೋಪಟಲಕ್ಕೆ ಕ್ಷಣಾರ್ಧದಲ್ಲಿ ಸ್ಪಷ್ಟಗೋಚರವಾಗುತ್ತದೆ.
ಮಹಾಭಾರತದ ಉದ್ದಕ್ಕೂ, ಅದರಲ್ಲೂ ಯುದ್ಧ ಪರ್ವಗಳಲ್ಲಿ ಕೃಷ್ಣನ ವ್ಯಕ್ತಿತ್ವದ ಈ ಆಯಾಮ ಅನಾವರಣಗೊಳ್ಳುತ್ತದೆ. The battle is fought in the mind ಎಂಬ ಮಾತಿದೆ. ಮನಸ್ಸಿನಾಟ ಗೊತ್ತಿದ್ದವ ಯುದ್ಧಕ್ಕೂ ಮೊದಲೇ ಸಮರವನ್ನು ಅರ್ಧ ಗೆದ್ದಿರುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾಬಲಕ್ಕಿಂತಲೂ ಸಾಕಷ್ಟು ಕಡಿಮೆ ಸೇನೆಯಿದ್ದರೂ ಪಾಂಡವರನ್ನು ಕೃಷ್ಣ ಗೆಲ್ಲಿಸುವುದು ಈ ರೀತಿಯ ಮೈಂಡ್ಗೇಮ್ಂದಾಗಿಯೇ.
ಭೀಷ್ಮರ ಸೇನಾಧಿಪತ್ಯದಲ್ಲಿ 10 ದಿನಗಳಾದರೂ ಯುದ್ಧ ರ್ತಾಕ ಅಂತ್ಯದತ್ತ ಸಾಗುತ್ತಿಲ್ಲ. ಹಿರಿಯನೂ, ಪೂಜ್ಯನೂ ಆದ ಭೀಷ್ಮನ ವಿರುದ್ಧ ಯಾರೂ ಶಸ್ತ್ರ ಎತ್ತಲಾರರು. ಹೀಗಿರುವಾಗ ಭೀಷ್ಮನನ್ನು ಉರುಳಿಸುವುದು ಹೇಗೆ? ಭೀಷ್ಮರ ಮನೋವೃತ್ತಿ ಕೃಷ್ಣನಿಗೆ ಗೊತ್ತು. ಹೀಗಾಗಿ ಆತ ಶಿಖಂಡಿಯನ್ನು ಎದುರು ನಿಲ್ಲಿಸಿದ. ಭೀಷ್ಮರ ಪಾಲಿಗೆ ಶಿಖಂಡಿ ಹೆಣ್ಣು, ಹೀಗಾಗಿ ಅವರು ಶಸ್ತ್ರತ್ಯಾಗ ಮಾಡಿದರು. ಆದರೆ ಕೃಷ್ಣನ ಲೆಕ್ಕದಲ್ಲಿ ಶಿಖಂಡಿ ಗಂಡು. ಹೀಗಾಗಿ ಇದೇನೂ ಯುದ್ಧನಿಯಮದ ಉಲ್ಲಂಘನೆಯಲ್ಲ!
ಮಹಾನ್ ಬಿಲ್ವಿದ್ಯಾ ಗುರು ದ್ರೋಣರ ಮನೋದೌರ್ಬಲ್ಯ ಪುತ್ರ ಅಶ್ವತ್ಥಾಮನೆಂಬುದು ಕೃಷ್ಣನಿಗೆ ಗೊತ್ತು. ಅಸತ್ಯ, ಅಧರ್ಮವಿಲ್ಲದ ಯುಧಿಷ್ಠಿರನಿಂದ ‘ಅಶ್ವತ್ಥಾಮೋ ಹತಃ’ ಎಂದು ಹೇಳಿಸಿದರೆ ಮಾತ್ರ ದ್ರೋಣರು ಅಧೀರರಾಗುತ್ತಾರೆ ಎಂಬುದನ್ನೂ ಕೃಷ್ಣ ಬಲ್ಲ.
ಯುದ್ಧಾನಂತರದಲ್ಲಿ ಪಾಂಡವ ಸಹೋದರರು ಹಿರಿಯರ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ, ತನ್ನ ನೂರು ಮಕ್ಕಳನ್ನು ಕೊಂದ ಭೀಮನನ್ನು ಧೃತರಾಷ್ಟ ಹೇಗೆ ಬರಮಾಡಿಕೊಳ್ಳಬಲ್ಲ? ಆತನ ಮನೋವೃತ್ತಿ ಏನು? ಕೃಷ್ಣನಿಗೆ ಗೊತ್ತು. ಹೀಗಾಗಿಯೆ ಅವನು ಮೊದಲಿಗೆ ಭೀಮನ ಪ್ರತಿಮೆಯನ್ನು ಧೃತರಾಷ್ಟ್ರನ ಎದುರಿಗೆ ತರುತ್ತಾನೆ.
ಕರ್ಣ ಪರ್ವದಲ್ಲಿ ಯುಧಿಷ್ಠಿರ-ಅರ್ಜುನರ ನಡುವಿನ ವಾಗ್ವಾದದ ಒಂದು ಪ್ರಸಂಗ ಮನೋವಿಜ್ಞಾನದ ದೃಷ್ಟಿಯಿಂದ ವಿಶೇಷವಾಗಿದೆ. ಸೇನಾಧಿಪತಿಯಾದ ನಂತರ ಕರ್ಣ ಅರ್ಜುನನನ್ನು ಕೊಲ್ಲುವ ಗುರಿಯೊಂದಿಗೆ ರಥವೇರಿ ಹೊರಡುತ್ತಾನೆ. ಕರ್ಣನ ಬಲ, ಗುರಿ ಗೊತ್ತಿದ್ದ ಕೃಷ್ಣ ಅರ್ಜುನನ್ನು ಬೇರೆಡೆಗೆ ಕರೆದೊಯ್ಯುತ್ತಾನೆ.
ಯುದ್ಧಭೂಮಿಯಲ್ಲಿ ಎದುರಾಗುವ ಉಳಿದ ನಾಲ್ವರು ಪಾಂಡವರನ್ನು ಈಡಾಡುವ ಕರ್ಣನಿಗೆ ಅವರಲ್ಲಿ ಯಾರೊಬ್ಬರನ್ನಾದರೂ ಅಥವಾ ಎಲ್ಲರನ್ನೂ ಕೊಲ್ಲುವುದು ಅಶಕ್ಯವಿರಲಿಲ್ಲ. ಆದರೂ ತಾಯಿ ಕುಂತಿಗೆ ಕೊಟ್ಟ ವಾಗ್ದಾನದಂತೆ ಪ್ರಾಣ ಉಳಿಸುತ್ತಾನೆ. ಈ ಸಂಘರ್ಷದಲ್ಲಿ ಯುಧಿಷ್ಠಿರನಂತೂ ಯಾವ ಪರಿ ಹಲ್ಲೆಗೆ ಒಳಗಾಗುತ್ತಾನೆಂದರೆ ಆತನನ್ನು ನಕುಲ-ಸಹದೇವರು ಯುದ್ಧಭೂಮಿಯಿಂದ ಶಿಬಿರಕ್ಕೆ ಹೊತ್ತೊಯ್ಯಬೇಕಾಗುತ್ತದೆ. ದೂರದಿಂದಲೇ ಈ ದೃಶ್ಯವನ್ನು ಗಮನಿಸುವ ಅರ್ಜುನ ಗಾಬರಿಯಿಂದ, ‘ಕೃಷ್ಣ, ಅಣ್ಣನಿಗೆ ಏನೋ ಆಘಾತವಾಗಿದೆ, ಅತ್ತ ನಡೆ’ ಎನ್ನುತ್ತಾನೆ.
ಆಗ ಕೃಷ್ಣ, ‘ಅರ್ಜುನ, ಯುಧಿಷ್ಠಿರನಿಗೆ ಏನೂ ಆಗಿಲ್ಲ, ಆಗುವುದಿಲ್ಲ. ಅತ್ತ ನೋಡು ಭೀಮ ತನ್ನ ಯುದ್ಧಕರ್ಮದಲ್ಲಿ ನಿರತನಾಗಿದ್ದಾನೆ. ನೀನು ಹಾಗೆಯೇ ಯುದ್ಧವನ್ನು ಮುಂದುವರಿಸು. ನಿನ್ನ ನಾಲ್ವರು ಸಹೋದರರೊಂದಿಗೆ ಹೋರಾಡಿ ಕರ್ಣ ಈಗ ಸ್ವಲ್ಪ ಆಯಾಸಗೊಂಡಿರುತ್ತಾನೆ. ಆತನಿಗೆ ಎದುರಾಗಲು ಇದೇ ಸೂಕ್ತ ಸಮಯ. ಸಿದ್ಧನಾಗು’ ಎನ್ನುತ್ತಾನೆ. ಆದರೂ ಅರ್ಜುನ ಕೇಳದಾದಾಗ ರಥವನ್ನು ಶಿಬಿರದತ್ತ ತರುತ್ತಾನೆ. ಆದರೆ ಶಿಬಿರದಲ್ಲಿ ಆಘಾತಕ್ಕೊಳಗಾಗಿದ್ದ ಯುಧಿಷ್ಠಿರ ಅರ್ಜುನನನ್ನು ಕಂಡೊಡನೆಯೆ, ‘ಸೂರ್ಯಾಸ್ತಕ್ಕೆ ಮೊದಲೇ ಯುದ್ಧಭೂಮಿಯಿಂದ ನೀನು ಜೀವಂತ ಬಂದಿದ್ದೀಯೆ. ಪ್ರಾಯಶಃ ನೀನು ಕರ್ಣನನ್ನು ಕೊಂದೇ ಬಂದಿರಬೇಕು. ಹೇಳು ಆ ಸೂತಪುತ್ರನನ್ನು ಹೇಗೆ ಕೊಂದೆ, ವರ್ಣಿಸು’ ಎನ್ನುತ್ತಾನೆ. ಆಗ ಅರ್ಜುನ, ‘ಇಲ್ಲ ಅಣ್ಣ. ಕರ್ಣನನ್ನು ಕೊಂದಿಲ್ಲ. ನಿನಗೇನಾದರೂ ಆಘಾತವಾಗಿರಬಹುದೆಂದು ಕುಶಲ ವಿಚಾರಿಸಲು ಬಂದೆ’ ಎನ್ನುತ್ತಾನೆ.
ಯುಧಿಷ್ಠಿರನಿಗೆ ಪಿತ್ತ ನೆತ್ತಿಗೇರಿತು. ‘ಅಯ್ಯೋ ರಣಹೇಡಿಯೆ? ಕರ್ಣನನ್ನು ಕೊಲ್ಲುವುದು ಬಿಟ್ಟು ನನ್ನ ಕುಶಲ ವಿಚಾರಿಸಲು ಬಂದೆಯಾ? ಮಹಾಬಲಶಾಲಿಯಾದ ಕರ್ಣನ ಎದುರು ಹೋರಾಡಲು ನಿನಗೆ ಯೋಗ್ಯತೆ ಇದೆಯೇ? ಗಾಂಡೀವದಂಥ ಬಿಲ್ಲು, ಕೃಷ್ಣನಂಥ ಸಾರಥಿ, ಧ್ವಜದಲ್ಲಿ ಮಾರುತಿ ಇದ್ದರೂ ನಿನಗೆ ಗೆಲ್ಲುವ ತಾಕತ್ತು ಇಲ್ಲ. ನಿನಗೂ ನಾಚಿಗಗೇಡು, ನಿನ್ನ ಗಾಂಡೀವಕ್ಕೂ ನಾಚಿಕೆಗೇಡು’ ಎಂದು ಹಂಗಿಸಿದ.
ಕರ್ಣಕಠೋರವಾದ ಈ ಮಾತುಗಳನ್ನು ಕೇಳುತ್ತಲೇ ಅರ್ಜುನ ಅವಡುಗಚ್ಚುತ್ತಾನೆ. ‘ನಿನಗೇನೋ ಘಾತವಾಗಿದೆಯೆಂದು ಕ್ಷೇಮ ವಿಚಾರಿಸಲು ಬಂದರೆ ನನ್ನ ಬಗ್ಗೆಯೇ ಹೀಗೆಲ್ಲ ಮಾತನಾಡುತ್ತೀಯಾ? ನನ್ನ ಗಾಂಡೀವವನ್ನು ಅವಮಾನಿಸುತ್ತೀಯಾ? ತಾಳು ನಿನಗೇ ಗತಿ ಕಾಣಿಸುತ್ತೀನಿ’ ಎಂದು ಖಡ್ಗ ಹಿರಿದು ಮುನ್ನುಗ್ಗಿದ. ಕೃಷ್ಣ ಅರ್ಜುನನನ್ನು ತಡೆದು, ‘ಇದೇನು ಮಾಡುತ್ತಿದ್ದೀರಿ? ಶತ್ರುಗಳೊಂದಿಗೆ ಹೋರಾಡುವುದನ್ನು ಬಿಟ್ಟು, ನೀವು ನೀವೇ ಕಾದಾಡುತ್ತಿದ್ದೀರಲ್ಲ? ಯುದ್ಧದಿಂದಾಗಿ ನಿಮ್ಮ ವಿವೇಕಕ್ಕೂ ಮಂಕು ಕವಿಯಿತೇ?’ ಎಂದು ಹೇಳಿ ಸನ್ನಿವೇಶವನ್ನು ತಿಳಿಯಾಗಿಸಲು ಕೆಲವು ಕಥನಗಳನ್ನು ವಿವರಿಸಿದ.
ಮೇಲ್ನೋಟಕ್ಕೆ ಯಾವುದು ನಿಜದಂತೆ ಕಾಣುತ್ತದೆಯೋ ವಾಸ್ತವವಾಗಿ ಅದು ಬೇರೆಯೇ ಆಗಿರಬಹುದು ಎಂಬ ನೀತಿಯ ಕಥನಗಳು ಅವು. ಕಥೆಗಳನ್ನು ಕೇಳುತ್ತಿದ್ದಂತೆಯೇ ನಮ್ಮ ಮನಸ್ಸು ಕಲ್ಪನಾಲೋಕಕ್ಕೆ ದಾಟುತ್ತದೆ. ಕಥೆಯ ಎಳೆಗಳನ್ನು ರ್ತಾಕವಾಗಿ ವಿಶ್ಲೇಷಿಸಲು ತೊಡಗುತ್ತದೆ. ಹೀಗಾದಾಗ ಕೋಪ, ಉದ್ರೇಕಗಳಿಗೆ ಜಾಗವಿರುವುದಿಲ್ಲ. ಕೃಷ್ಣ ಇದನ್ನು ಬಲ್ಲ. ಕೃಷ್ಣನ ಮಾತುಗಳನ್ನು ಕೇಳಿ ಅರ್ಜುನ ಶಾಂತನಾದರೂ ಒಂದು ಧರ್ಮಸೂಕ್ಷ್ಮ ಮುಂದಿಟ್ಟ. ‘ಯಾರೇ ಆಗಲಿ, ತನ್ನ ಗಾಂಡೀವವನ್ನು ನಿಂದಿಸಿದರೆ ಅವರನ್ನು ಕೊಲ್ಲುವುದಾಗಿ ಶಪಥ ಮಾಡಿದ್ದೇನಲ್ಲ, ಏನು ಮಾಡುವುದು?’
ಇದಕ್ಕೂ ಕೃಷ್ಣನಲ್ಲಿ ಪರಿಹಾರವಿದೆ. ಆತ ಹೇಳಿದ. ‘ಅರ್ಜುನ, ನಿನಗೆ ಕೊಲ್ಲಲು ಎರಡು ಆಯ್ಕೆಗಳಿವೆ. ಯುಧಿಷ್ಠಿರನ ಭೌತಿಕ ಶರೀರವನ್ನು ಕೊಲ್ಲಬಹುದು ಅಥವಾ ಆತನನ್ನು ನಿಂದಿಸುವ ಮೂಲಕ ಭಾವನಾತ್ಮಕವಾಗಿ ಕೊಲ್ಲಬಹುದು. 2ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ’. ಅರ್ಜುನನಿಗೂ ಅದು ಸರಿ ಎನಿಸಿ, ಯುಧಿಷ್ಠಿರನನ್ನು ನಿಂದಿಸಿದ. ನಂತರ ಅರ್ಜುನನಿಗೆ ಮತ್ತೊಂದು ಧರ್ಮಸೂಕ್ಷ ್ಮ ಕಾಡಿತು: ‘ಹಿರಿಯ ಸಹೋದರ ತಂದೆಯ ಸಮಾನ. ಕಿರಿಯವನಾದ ನಾನು ಹೀಗೆ ಅಣ್ಣನನ್ನು ನಿಂದಿಸಿದ್ದು ಅಧರ್ಮ. ನಾನು ಬದುಕಲು ಯೋಗ್ಯನಲ್ಲ. ನಾನು ಸಾಯಬೇಕು’ ಎಂದು ಗೋಳಿಟ್ಟ.
ಕೃಷ್ಣ ಹೇಳಿದ, ‘ಅರ್ಜುನ ನೀನು ಸಾಯಲು ಎರಡು ಆಯ್ಕೆಗಳಿವೆ. ನಿನ್ನ ಭೌತಿಕ ಶರೀರದ ಹತ್ಯೆ ಮಾಡಿಕೊಳ್ಳಬಹುದು. ಇಲ್ಲವೇ ನಿನ್ನನ್ನು ನೀನು ಹೊಗಳಿಕೊಳ್ಳುವ ಮೂಲಕ ಬೌದ್ಧಿಕ ಹತ್ಯೆ ಮಾಡಿಕೊಳ್ಳಬಹುದು. ಆತ್ಮರತಿಯೂ (ಪದಶಃ ಇದು ಸ್ವಯಂರತಿ ಎಂದಾಗಬೇಕು) ಒಂದು ರೀತಿ ಸ್ವ-ಹತ್ಯೆಯೇ (ಆತ್ಮಹತ್ಯೆ) ನೀನು 2ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ’.
ಅರ್ಜುನ ತನ್ನನ್ನು ಹೊಗಳಿಕೊಳ್ಳಲು ಶುರುಮಾಡುತ್ತಾನೆ. ನಂತರ ಯುಧಿಷ್ಠಿರನ ಕ್ಷಮಾಪಣೆ ಕೇಳುತ್ತಾನೆ. ಯುಧಿಷ್ಠಿರನೂ ಅರ್ಜುನನ ಕ್ಷಮೆ ಯಾಚಿಸುತ್ತಾನೆ. ಪರಿಸ್ಥಿತಿ ತಿಳಿಗೊಳಿಸಿ ಕೃಷ್ಣ ಅರ್ಜುನನನ್ನು ಮರಳಿ ಯುದ್ಧಭೂಮಿಗೆ ಕರೆದೊಯ್ಯುತ್ತಾನೆ.
ಇಲ್ಲಿ, ಭೌತಿಕ ಶರೀರದ ಹತ್ಯೆಯನ್ನು ಬೇರೆಯಾಗಿ ನೋಡಿರುವುದು ಹಾಗೂ ಪರನಿಂದನೆ ಮತ್ತು ಆತ್ಮರತಿಯೂ ಹತ್ಯೆಯೇ ಎಂದು ಕೃಷ್ಣ ವ್ಯಾಖ್ಯಾನಿಸಿರುವುದು ಮನಃಶಾಸ್ತ್ರದ ದೃಷ್ಟಿಯಿಂದ ಅಧ್ಯಯನಯೋಗ್ಯವಾಗಿವೆ.
ಒಟ್ಟಾರೆ, ಪೂರ್ಣತೆ ಮತ್ತು ಅನಂತತೆಯ ಸಾಕಾರರೂಪನಾದ ಕೃಷ್ಣನ ಮಾರ್ಗದಲ್ಲಿ ತೆರಳಿದವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ನಮ್ಮ ಬೌದ್ಧಿಕ ಇತಿಮಿತಿ, ಮನೋಸಂಕುಚಿತತೆಯಿಂದಾಗಿ ಕೃಷ್ಣನ ಅನಂತ ವ್ಯಕ್ತಿತ್ವ ವಿರೋಧಾಭಾಸದಂತೆ ಕಾಣುವುದರಲ್ಲಿ ಅಚ್ಚರಿ ಇಲ್ಲ. ಆತನ ದೈವೀಕತೆಯನ್ನು ಗುರುತಿಸಿದವರಿಗೆ ಕೂಡ ಆತ ಪೂರ್ಣನಾಗಿ ದಕ್ಕಲಿಲ್ಲ. ಆತನೊಂದು ಮಹಾಸಾಗರ, ನಮ್ಮ ಬೊಗಸೆಗೆ ನಿಲುಕುವಷ್ಟೇ ಆತನನ್ನು ಕಾಣಬಹುದು. ಆತ ದಕ್ಕುವುದು ನಮ್ಮ ಯೋಗ್ಯತೆ, ಸಾಮರ್ಥ್ಯಕ್ಕೆ ಅನುಸಾರವಾಗಿಯಷ್ಟೆ. ನಮ್ಮ ಅರಿವಿನ ಪರಿಧಿ ವಿಸ್ತಾರವಾದಷ್ಟೂ ಆತ ಹೆಚ್ಚು ಅರ್ಥವಾಗುತ್ತ ಹೋಗುತ್ತಾನೆ. ಮುಂದೆಂದಾದರೂ ಕೃಷ್ಣನನ್ನು ಪರಿಪೂರ್ಣವಾಗಿ ದಕ್ಕಿಸಿಕೊಳ್ಳುವುದು ಸಾಧ್ಯವಾದೀತೆ? ಗೊತ್ತಿಲ್ಲ. ಕೃಷ್ಣನನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಬೇಕೆಂದರೆ ನಾವು ಕೃಷ್ಣನೇ ಆಗಬೇಕು, ಬೇರೆ ವಿಧಿಯಿಲ್ಲ!
(ಲೇಖಕರು ವಿದ್ವಾಂಸರು)