

ಬೆಂಗಳೂರು: ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎನ್ನುವ ಅಭಿಪ್ರಾಯ ನ್ಯಾಯಾಲಯ ವ್ಯಕ್ತಪಡಿಸಿದ ಬೆನ್ನಲ್ಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಹೀಗಾಗಿ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ತೀರ್ಪಿನಲ್ಲಿರುವ ಆಶಯ ಪರಿಗಣಿಸಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ, ಸಂಪುಟದಲ್ಲಿ ಈ ವಿಷಯದ ಕುರಿತು ರ್ಚಚಿಸುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಒಳಮೀಸಲಾತಿ ಮತ್ತು ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಅಜೆಂಡಾ ಇಲ್ಲದಿದ್ದರೂ ಅನೌಪಚಾರಿಕ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಮುನಿಸಿಪಲ್ ಕಾರ್ಪೆರೇಷನ್ (ಎರಡನೇ ತಿದ್ದುಪಡಿ) ವಿಧೇಯಕವೂ ಸಂಪುಟದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಸರ್ಕಾರದ ಮುಂದಿದ್ದು, ಅದೂ ಸಂಪುಟದ ಒಪ್ಪಿಗೆ ಕಾಯ್ದಿದೆ.
61 ಪ್ರಕರಣಗಳಿಗೆ ಮುಕ್ತಿ?: ರಾಜ್ಯದ ಪೊಲೀಸ್ ಠಾಣೆಗಳಲ್ಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಕೈಬಿಡುವ ಪ್ರಸ್ತಾಪ ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಜು.22ರಂದು ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ 63 ಪ್ರಕರಣಗಳನ್ನು ಒಳಗೊಂಡ 21 ಕಡತ ಪರಿಶೀಲಿಸಲಾಗಿದೆ. ಒಟ್ಟು 61 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವುದು ಸೂಕ್ತ ಎಂಬ ಅಭಿಪ್ರಾಯ ಸಂಪುಟ ಸಭೆಗೆ ಶಿಫಾರಸಾಗಿದೆ. ಎಂ.ಪಿ. ರೇಣುಕಾಚಾರ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಬೆಂಬಲಿಗರು ಹೊನ್ನಾಳಿಯಲ್ಲಿ ಜಯಕಾರ ಹಾಕುತ್ತ ಗುಂಪು ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರ ಮನೆ ಸಮೀಪ ಬೈದಾಡಿಕೊಂಡು ಸುತ್ತಾಡಿದ್ದಲ್ಲದೆ, ಅವರ ಮನೆಯವರ ಜತೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಉದ್ದೇಶದಿಂದ ಪಟಾಕಿ ಹಚ್ಚಲು ಮುಂದಾಗಿದ್ದ ಪ್ರಕರಣ, ಹುಣಸೂರು ಹನುಮ ಜಯಂತಿ ಪ್ರಕರಣವೂ ಕೈಬಿಡುವ ಪಟ್ಟಿಯಲ್ಲಿದೆ ಎನ್ನಲಾಗಿದೆ. ಡಿಜಿ ಮತ್ತು ಐಜಿಪಿ, ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆ ನಿರ್ದೇಶಕರು, ಕಾನೂನು ಇಲಾಖೆ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಸೂಕ್ತವಾಗಿರುವುದಿಲ್ಲ ಎಂದು ಶಿಫಾರಸು ಮಾಡಿದ ಬಳಿಕ ಸಂಪುಟ ಉಪ ಸಮಿತಿ ಪ್ರಕರಣ ಕೈ ಬಿಡಲು ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.