

ಸೋಮವಾರಪೇಟೆ: ಪರಿವಾರ ದೇವರುಗಳು ನೆಲೆನಿಂತಿರುವ ಗೌಡಳ್ಳಿ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯದ ಜಾತ್ರೋತ್ಸವ ಫೆ.24 ಮತ್ತು 25ರಂದು ನಡೆಯಲಿದೆ.
ಗೌಡಳ್ಳಿ, ದೊಡ್ಡಮಳ್ತೆ ಗ್ರಾಮೀಣ ಜನರು ಕೃಷಿ ಕೆಲಸಗಳಿಗೆ ರಜೆ ಹಾಕಿ ಎರಡು ದಿನ ಜಾತ್ರೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಎಲ್ಲಾ ತರಹದ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಕೀಡಾಪ್ರತಿಭೆ ಪ್ರದರ್ಶಿಸುತ್ತಾರೆ. ಎರಡು ದಿನ ಧಾರ್ಮಿಕ ಪೂಜೆಗಳು, ಅನ್ನದಾನ ನಡೆಯುತ್ತದೆ.
ಈ ಕ್ಷೇತ್ರದಲ್ಲಿ ನವದುರ್ಗಾ ಪರಮೇಶ್ವರಿಯ ಪರಿವಾರದ ದೇವರುಗಳು ನೆಲೆನಿಂತಿರುವುದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿದೆ. ನವದುರ್ಗಾಪರಮೇಶ್ವರಿ ಗುಡಿಯ ಪಕ್ಕದಲ್ಲೇ ಶ್ರೀ ವೀರಭದ್ರ ಕ್ಷೇತ್ರಪಾಲಕರಾಗಿದ್ದಾರೆ. ಪರಿವಾರ ದೈವಗಳಾದ ರಕ್ತೇಶ್ವರಿ, ವರ್ನರ ಪಂಜುರ್ಲಿ, ಮಂತ್ರವಾದಿ ಗುಳಿಗಾ, ಮಿಲಿನನಾಗ ದೇವಿಯ ಸೈನಿಕರಾಗಿ ನೆಲೆನಿಂತಿದ್ದಾರೆ. ಇವೆಲ್ಲಾ ಕಾರಣಗಳಿಂದ ಅತೀ ಶಕ್ತಿ ಹಾಗೂ ಪವಿತ್ರ ಕ್ಷೇತ್ರವೆಂದೆ ಜನರು ನಂಬಿದ್ದಾರೆ.
ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಕ್ಷಿಣಕನ್ನಡ ಮೂಲದವರು ವಾಸವಿರುವ ಕಾರಣದಿಂದಲೂ ಇರಬಹುದು, ಈ ಕ್ಷೇತ್ರದಲ್ಲಿ ಪೂಜಾ ಪುನಸ್ಕಾರಗಳು ನಡೆದರೆ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ.
20ವರ್ಷಗಳ ಹಿಂದೆ ಜಾನುವಾರು ಜಾತ್ರೆ ನಡೆಯುತ್ತಿತ್ತು. ಈಗ ಜಾನುವಾರುಗಳನ್ನು ಸಾಕುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಜಾನುವಾರುಗಳ ಮಾರಾಟವಿರುವುದಿಲ್ಲ. ಸೋಮವಾರ ಬೆಳಗ್ಗೆ 8 ಗಂಟೆಗೆ ದೇವಿಗೆ ಆರತಿ ಬೆಳೆಗುವುದರ ಮೂಲಕ ಜಾತ್ರೋತ್ಸವ ಪ್ರಾರಂಭವಾಗುತ್ತದೆ.
10ಗಂಟೆಗೆ ಪಶು ಚಿಕಿತ್ಸಾ ಶಿಬಿರ, ಪುರುಷರಿಗೆ ಪುಟ್ಭಾಲ್ ಪಂದ್ಯ ನಡೆಯಲಿದೆ. ವಿವಿಧ ರಾಜ್ಯಗಳ ಆಟಗಾರರು ಮತ್ತು ವಿದೇಶದ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ಗ್ರಾಮೀಣ ಜನರನ್ನು ರಂಜಿಸಲಿದ್ದಾರೆ. ಗ್ರಾಮದವರು ಹೊರಜಿಲ್ಲೆ ಮತ್ತು ಹೊರರಾಜ್ಯದಿಂದ ಆಟಗಾರರನ್ನು ಕರೆಸಿ ತಂಡ ಮಾಡಿಕೊಳ್ಳುತ್ತಾರೆ. ಆಟಗಾರರ ಪೂರ್ಣ ಖರ್ಚನ್ನು ಗ್ರಾಮದವರೇ ಭರಿಸುತ್ತಾರೆ. ಒಂದೊಂದು ಗ್ರಾಮದ ತಂಡಗಳು ಬಲಿಷ್ಠವಾಗಿರುತ್ತವೆ. ಟ್ರೋಫಿ ಗೆಲ್ಲುವುದೇ ಗ್ರಾಮದವರಿಗೆ ಪ್ರತಿಷ್ಠೆಯಾಗಿರುತ್ತದೆ. ಪ್ರಥಮ ಬಹುಮಾನ ಒಂದು ಲಕ್ಷ ರೂ.ನಗದು ಮತ್ತು ಆಕರ್ಷಕ ಟ್ರೋಫಿ ಇರುತ್ತದೆ. ಮಹಿಳೆಯರಿಗೆ ಕ್ರೀಡೆಗಳು, ಗುಡ್ಡಗಾಡು ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ನಡೆಯುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
26ರಂದು ರಾತ್ರಿ ವೀರಗಾಸೆ ಮತ್ತು ಕಾಸರಗೋಡು ತಂಡವರಿಂದ ಯಕ್ಷಗಾನ ಬಯಲಾಟ ನಡೆಯುತ್ತದೆ.
1970ರಲ್ಲಿ ದಕ್ಷಿಣ ಕನ್ನಡ ಮೂಲದ ಎ.ಟಿ.ವೆಂಕಟರಮಣಚಾರ್ ಎಂಬ ಯಕ್ಷಗಾನ ಭಾಗವತರು ಗೌಡಳ್ಳಿ ಕಂದಾಯ ಇಲಾಖೆಗೆ ಗ್ರಾಮಲೆಕ್ಕಿಗರಾಗಿ ಸೇವೆಗೆ ನಿಯುಕ್ತಿಗೊಂಡರು. ಯಕ್ಷಗಾನದ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ವ್ಯಕ್ತಿ. ಸ್ಥಳೀಯ ಗ್ರಾಮಸ್ಥರಿಗೆ ಯಕ್ಷಗಾನ ಕಲಿಸಿ ವರ್ಷಕೊಮ್ಮೆ ನಾಟಕ ಮಾಡಿಸುತ್ತಿದ್ದರು.
ಗೌಡಳ್ಳಿ ಪ್ರೌಢಶಾಲೆಯ ಎದುರು 2 ಎಕರೆ ಸರ್ಕಾರಿ ಜಾಗವಿತ್ತು. ಆ ಜಾಗದಲ್ಲಿ ತ್ರಿಶೂಲವನ್ನು ಇಟ್ಟು ಪೂಜೆ ಪ್ರಾರಂಭಿಸಿದರು. ನಂತರ ಕಾಡುಕಡಿದು ಬಯಲ ಮಾಡಿಕೊಂಡು, ಅಲ್ಲಿಯೇ ನಾಟಕ ಮತ್ತು ನವದುರ್ಗಾಪರಮೇಶ್ವರಿಯ ದೇವಿಯ ಆರಾಧನೆ ನಡೆಸಲು ಪ್ರಾರಂಭಿಸಿದರು.
1977ರಲ್ಲಿ ಹಿರಿಕರ ಗ್ರಾಮದ ಕೃಷಿಕ ದಿ.ಬಿ.ಬಿ.ನಿರ್ವಾಣಪ್ಪ ಶ್ರೀ ನವದುರ್ಗಾಪರಮೇಶ್ವರಿ ವಿಗ್ರಹ ನಿರ್ಮಿಸಿಕೊಟ್ಟರು. ನಂದಿಗುಂದ ದಿ. ನಟರಾಜ್ ಎಂಬವರು ಗರ್ಭಗುಡಿ ನಿರ್ಮಿಸಿಕೊಟ್ಟರು. ಇದನ್ನು ಸರ್ವಧರ್ಮ ಕ್ಷೇತ್ರವೆಂದೇ ಕರೆಯಲಾಯಿತು. ದಾನಿಗಳ ಸಹಕಾರದಿಂದ ಕೇತ್ರ ಅಭಿವೃದ್ಧಿ ಹೊಂದಿದೆ. ದೇವಾಲಯದ ಹೆಸರಿನಲ್ಲಿ ಎರಡು ಎಕರೆ ಕಾಫಿ ತೋಟವಿದೆ. ಕಾಳುಮೆಣಸು ಬೆಳೆಯಲಾಗುತ್ತಿದೆ.