ಇಂದು 4 ಸ್ಥಾನಗಳ ಫಲಿತಾಂಶ

DCC Bank
Published on

ಬೆಳಗಾವಿ: ಜಿಲ್ಲಾ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆ ಪ್ರಮುಖ ಕೇಂದ್ರ ಸ್ಥಾನವಾಗಿರುವ ಹುಕ್ಕೇರಿ, ನಿಪ್ಪಾಣಿ ಸೇರಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಸಹಕಾರಿ ವಲಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಎಡೆಮಾಡಿಕೊಟ್ಟಿದ್ದ ಡಿಸಿಸಿ ಬ್ಯಾಂಕಿನ 16 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಬಾಕಿ ಉಳಿದಿದ್ದ ಏಳು ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಚುನಾವಣೆ ನಡೆದಿತ್ತು. ಅದರಲ್ಲಿ ಅಥಣಿ, ರಾಯಬಾಗ, ರಾಮದುರ್ಗ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದ್ದ, ನಿಪ್ಪಾಣಿ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು ಕ್ಷೇತ್ರದ ಫಲಿತಾಂಶ ಬಾಕಿ ಉಳಿದಿತ್ತು. ಅ.28ರಂದು ಕೋರ್ಟ್‌ನಲ್ಲಿ ವಿಚಾರಣೆ ನಡೆದ ಬಳಿಕ ಫಲಿತಾಂಶ ಈ ಕ್ಷೇತ್ರಗಳ ಕುರಿತು ಸ್ಪಷ್ಟ ನಿರ್ಧಾರ ಹೊರಬಲಿದೆ.

ನಿಪ್ಪಾಣಿ ಕ್ಷೇತ್ರದ ಅಣ್ಣಾಸಾಹೇಬ ಜೊಲ್ಲೆ, ಉತ್ತಮ ಪಾಟೀಲ, ಹುಕ್ಕೇರಿ ಕ್ಷೇತ್ರದ ರಮೇಶ ಕತ್ತಿ, ಬಸನಗೌಡ ಪಾಟೀಲ, ಬೈಲಹೊಂಗಲ ಕ್ಷೇತ್ರದ ಡಾ.ವಿ.ಐ.ಪಾಟೀಲ, ಮಹಾಂತೇಶ ದೊಡಗೌಡರ ಹಾಗೂ ಕಿತ್ತೂರು ಕ್ಷೇತ್ರದ ವಿಕ್ರಂ ಇನಾಂದಾರ, ನಾನಾಸಾಹೇಬ ಪಾಟೀಲ ಕಣದಲ್ಲಿದ್ದಾರೆ. ಮತದಾರರ ದೂರಿನ ಪ್ರಕರಣ ವಿಚಾರಣೆಯ ಬಳಿಕ ಕೋರ್ಟ್ ಆದೇಶದನ್ವಯ ಫಲಿತಾಂಶ ಪ್ರಕಟವಾಗಲಿದೆ. ಅಲ್ಲಿಯವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೂಡ ಸ್ಥಗಿತಗೊಂಡಿದೆ.

ಈಗಾಗಲೇ ಡಿಸಿಸಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ಪೆನಲ್‌ನಲ್ಲಿ ಗೆಲುವು ಸಾಧಿಸಿರುವವರ ಜತೆಗೆ ಒಂದು ಸುತ್ತಿನ ಚರ್ಚೆ ನಡೆದಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷರು ಯಾರು ಎಂಬುದು ಅಂತಿಮಗೊಂಡಿಲ್ಲ. ಬಾಕಿ ಉಳಿದಿರುವ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡ ಬಳಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ವಿಷಯದಲ್ಲಿ ಆತುರದ ನಿರ್ಧಾರ ಕೈಗೊಳ್ಳುತ್ತಿಲ್ಲ. ಅಧ್ಯಕ್ಷ ಸ್ಥಾನಕ್ಕಾಗಿ ಲಿಂಗಾಯತ ಸಮುದಾಯದ ನಾಲ್ವರ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ನಿಜ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಬ್ಯಾಂಕಿನ ಹಾಲಿ, ಮಾಜಿ ನಿರ್ದೇಶಕರು ತಿಳಿಸಿದ್ದಾರೆ.

ಹುಕ್ಕೇರಿ ಕ್ಷೇತ್ರದ ಮೇಲೆ ಕಣ್ಣು: ಈ ಬಾರಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ 16 ನಿರ್ದೇಶಕ ಸ್ಥಾನಗಳ ಪೈಕಿ ಏಳು ಕ್ಷೇತ್ರದಲ್ಲಿ ಮಾತ್ರ ನೇರಾನೇರ ಸ್ಪರ್ಧೆ ನಡೆದಿತ್ತು. ಅದರಲ್ಲಿ ಹುಕ್ಕೇರಿ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ ಸ್ಪರ್ಧೆಯಲ್ಲಿರುವುದರಿಂದ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net