ವ್ಯಸನ ಬಿಡಿ, ಆರೋಗ್ಯ ಕಾಪಾಡಿಕೊಳ್ಳಿ

must
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೀಡಿ ಸಿಗರೇಟ್ ಸೇದುವುದರಿಂದ ಸೇದುವವರ ಆರೋಗ್ಯಕ್ಕೆ ಶೇ.15 ಹಾನಿಯಾದರೆ ಸುತ್ತಮುತ್ತಲಿನ ಜನರ ಆರೋಗ್ಯಕ್ಕೆ ಶೇ.85 ಹಾನಿಯಾಗುತ್ತದೆ ಬೀದಿ ಸಿಗರೇಟಿನಿಂದ ಹೊರಹೊಮ್ಮುವ ಹೊಗೆಯಲ್ಲಿ ಸುಮಾರು 4 ಸಾವಿರಷ್ಟು ಆರೋಗ್ಯಕ್ಕೆ ಹಾನಿಕಾರಕವಾಗುವ ರಾಸಾಯನಿಕವಿರುತ್ತದೆ ಆದ್ದರಿಂದಲೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಆದ್ದರಿಂದ ವ್ಯಸನಬಿಡಿ ಅರೋಗ್ಯ ಕಾಪಾಡಿಕೊಳ್ಳಿ ಎಂದು ತಂಬಾಕು ಜಿಲ್ಲಾ ಸಲಹೆಗಾರ್ತಿ ವಿದ್ಯಾರಾಣಿ ತಿಳಿಸಿದರು.

ವಿಶ್ವತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಧೂಮಪಾನ, ತಂಬಾಕು ಸೇವನೆಯಂಥ ದುಶ್ಚಟಗಳಿಗೆ ಹೆಚ್ಚು ದಾಸರಾಗಿರುವುದು ಕಂಡುಬರುತ್ತದೆ, ಮಾನಸಿಕ ಒತ್ತಡ ನಿವಾರಣೆಗೆ ಇಂಥ ಚಟ ಬೆಳೆಸಿಕೊಳ್ಳುತ್ತಾರೆ ಇದರಿಂದ ಕ್ರಮೇಣ ಅವರು ಅನಾರೋಗ್ಯಗೊಳ್ಳುತ್ತಾರೆ ಆದ್ದರಿಂದ ಮಾನಸಿಕ ಒತ್ತಡ ನಿವಾರಣೆಗೆ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ದೇಶದಲ್ಲಿ ಪ್ರತಿ 6 ಸೆಕೆಂಡಿಗೆ ಈ ಅಭ್ಯಾಸದ ಪರಿಣಾಮ ವಿವಿಧ ಕಾಯಿಲೆಗಳಿಂದ ಸಾವು ಸಂಭವಿಸುತ್ತಿದೆ ಇದೊಂದು ಗಂಭೀರವಾದ ವಿಷಯವಾಗಿದ್ದು ಈ ಬಗ್ಗೆ ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತವಾಗಿದೆ, ಇದರ ಜತೆಗೆ ಪಾಶ್ವವಾಯು, ನರಸಂಬಂಧಿತ ಕಾಯಿಲೆ ಸೇರಿ ತಲೆಯಿಂದ ಕಾಲಿನವರೆಗೆ ಎಲ್ಲಬಗೆಯ ಅನಾರೋಗ್ಯ ಕಾಡುತ್ತದೆ, ಮಹಿಳೆಯರಲ್ಲಿ ಬಂಜೆತನ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವ್ಯಸನಮುಕ್ತ ಕೇಂದ್ರ: ಬೀಡಿ, ಸಿಗರೇಟ್ ಹಾಗೂ ವಿವಿಧ ತಂಬಾಕು ಚಟಗಳನ್ನು ಬಿಡಿಸಲು ಜಿಲ್ಲೆಯ ಹಲವೆಡೆ ವ್ಯಸನಮುಕ್ತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಇಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಆದ್ದರಿಂದ ಇಂದಿನಿಂದಲೇ ಇಂಥ ವ್ಯಸನದಿಂದ ಮುಕ್ತರಾಗಲು ಮುಂದಾಗಬೇಕು ಎಂದು ವಿದ್ಯಾರಾಣಿ ಕರೆ ನೀಡಿದರು.

ಎಲ್ಲೆಡೆ ಜಾಗೃತಿ ಜಾಥಾ: ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಜಿಲ್ಲೆಯ ಹಲವು ಕಡೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು, ತಂಬಾಕು ಬಿಡಿ ಆರೋಗ್ಯ ಕಾಪಾಡಿಕೊಳ್ಳಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಖಚಿತ ಎಂಬ ೋಷವಾಕ್ಯಗಳ ಬ್ಯಾನರ್ ಹಿಡಿದು ಸಿಬ್ಬಂದಿ ಮೆರವಣಿಗೆ ಸಾಗಿದರು. ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕರಪತ್ರ ವಿತರಿಸಿ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಾನೂನುಬಾಹೀರ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಖಾನೆಗಳಲ್ಲಿ ಅರಿವು: ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ಭಾಗದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ ಅಲ್ಲಿನ ಕೈಗಾರಿಕೆಗಳಲ್ಲಿನ ಉದ್ಯೋಗಿಗಳಿಗೆ ತಂಬಾಕು ಸೇವನೆಯಿಂದ ಆಗಬಹುದಾದ ದುರಂತಗಳ ಬಗ್ಗೆ ಮಾಹಿತಿ ನೀಡಿದರು. ತಂಬಾಕು ಸೇವನೆ ತ್ಯಜಿಸುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪರವಾನಗಿ ಪಡೆಯುವಂತೆ ಸೂಚನೆ: ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ಲೈಸೆನ್ಸ್ ಪಡೆಯುವಂತೆ ಸೂಚನೆ ನೀಡಲಾಯಿತು. ಸರ್ಕಾರದ ನಿಯಮಾನುಸಾರ ಲೈಸೆನ್ಸ್ ಪಡೆದು ತಂಬಾಕು ಉತ್ಪನ್ನ ಮಾರಾಟ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು. ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ನೀಡಲಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವರ್ತಕರು ಲೈಸೆನ್ಸ್ ಪಡೆಯುತ್ತಿದ್ದಾರೆ ಆಯಾ ತಾಲೂಕಿನ ನಗರಸಭೆ ಹಾಗೂ ಪುರಸಭೆಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 480 ಪ್ರಕರಣ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಳೆದ ಏಪ್ರಿಲ್‌ನಿಂದ ಇದುವರೆಗೆ ನಿಯಮ ಬಾಹೀರ ತಂಬಾಕು ಮಾರಾಟಕ್ಕೆ ಸಂಬಂಧಿಸಿದಂತೆ 480 ಪ್ರಕರಣ ದಾಖಲಿಸಲಾಗಿದ್ದು, 94 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ, ಹೊಸಕೋಟೆಯಲ್ಲಿ 192 ಪ್ರಕರಣ, ದೇವನಹಳ್ಳಿಯಲ್ಲಿ 91, ದೊಡ್ಡಬಳ್ಳಾಪುರದಲ್ಲಿ 209 ಹಾಗೂ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ 88 ಪ್ರಕರಣ ದಾಖಲಿಸಲಾಗಿದೆ.

ಬೀಡಿ, ಸಿಗರೇಟ್ ಸೇವನೆ ಸೇದುವವರಿಗಷ್ಟೇ ಅಲ್ಲದೆ ಸುತ್ತಮುತ್ತಲ ಜನರ ಆರೋಗ್ಯಕ್ಕೂ ಹಾನಿ ಮಾಡುತ್ತದೆ, ಪ್ರಮುಖವಾಗಿ ತಂಬಾಕು ಸೇವನೆ ಕ್ಯಾನ್ಸರ್ ಮಹಾಮಾರಿಯನ್ನು ಆಹ್ವಾನಿಸುತ್ತದೆ, ಒಂದು ಕುಟುಂಬದಲ್ಲಿ ಒಬ್ಬರಿಕೆ ಈ ರೋಗ ತಗಲಿದರೆ ಆ ಕುಟುಂಬದ ಭವಿಷ್ಯವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಜಿಲ್ಲೆಯಲ್ಲಿ ವ್ಯಸನಮುಕ್ತ ಕೇಂದ್ರಗಳಿದ್ದು ಇಲ್ಲಿನ ಸದುಪಯೋಗ ಪಡೆದು ವ್ಯಸನಮುಕ್ತರಾಗುವ ಮೂಲಕ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.

ವಿದ್ಯಾರಾಣಿ, ಜಿಲ್ಲಾ ತಂಬಾಕು ಸಲಹೆಗಾರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net