

ಗುರುಪುರ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಪಡುಪೆರಾರ ಗ್ರಾಪಂ ಆಶ್ರಯದಲ್ಲಿ ಕೈಗೊಂಡಿರುವ ‘ತಂಬಾಕುಮುಕ್ತ ಪಡುಪೆರಾರ ಗ್ರಾಮ’ ಘೋಷಣಾ ಕಾರ್ಯಕ್ರಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ, ಪಂಚಾಯಿತಿ ಕಚೇರಿ ಬಳಿ ಅಳವಡಿಸಲಾದ ‘ತಂಬಾಕುಮುಕ್ತ ಪಡುಪೆರಾರ ಗ್ರಾಮ’ ಎಂಬ ಸ್ವಾಗತ ಫಲಕ ಅನಾವರಣಗೊಳಿಸಿದರು. ತಂಬಾಕುಮುಕ್ತ ಘೋಷಣಾ ಭಿತ್ತಿಪತ್ರ ಅನಾವರಣಗೊಳಿಸಿದ ಬಳಿಕ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ತಂಬಾಕು ಮುಕ್ತ ಗ್ರಾಮದ ಪ್ರಮಾಣವಚನ ಸ್ವೀಕರಿಸಿದರು. ಪಿಡಿಒ ಉಗ್ಗಪ್ಪ ಮೂಲ್ಯ ಮಾತನಾಡಿ, ಮಂಗಳೂರು ತಾಪಂ ಸಭೆಯಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಜಿಲ್ಲೆಯಲ್ಲಿ ಇದೇ ಪ್ರಥಮ ಎಂಬಂತೆ ಪಡುಪೆರಾರ ಗಾಪಂಯ ‘ಪಡುಪೆರಾರ ಗ್ರಾಮ’ ತಂಬಾಕುಮುಕ್ತ ಎಂದು ಘೋಷಿಸಲ್ಪಟ್ಟಿದೆ. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಗಿತ್ತು. ಇಲಾಖಾ ವತಿಯಿಂದ ಒಂದು ವರ್ಷದಿಂದ ಗ್ರಾಮದಲ್ಲಿ ಅಭಿಯಾನ ಜಾರಿಯಲ್ಲಿದ್ದು, ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದರು. ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್ ತಂಬಾಕು ದುಷ್ಪರಿಣಾಮ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಜಿಲ್ಲಾ ಆರೋಗ್ಯ ನಿಯಂತ್ರಣ ಕೋಶದ ಆಪ್ತ ಸಮಾಲೋಚಕ ವಿಜಯ್ ಕುಮಾರ್, ಪಂಚಾಯಿತಿ ಸದಸ್ಯರಾದ ನೂರ್ ಅಹ್ಮದ್, ಯಶವಂತ ಮಾತನಾಡಿದರು. ಸದಸ್ಯರಾದ ಗಣೇಶ್ ಬಿ.ಎಸ್., ವಿನೋದ್, ಆಶಾ-ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ, ರಿಕ್ಷಾ ಚಾಲಕರು, ಅಂಗಡಿ ಮಾಲೀಕರು, ಗ್ರಾಮಸ್ಥರು ಇದ್ದರು. ಪಿಡಿಒ ಉಗ್ಗಪ್ಪ ಮೂಲ್ಯ ಸ್ವಾಗತಿಸಿ, ಪಂಚಾಯಿತಿ ಪ್ರಭಾರ ಕಾರ್ಯದರ್ಶಿ ಕಮಲಾಕ್ಷ ವಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತಿಮ್ಮಯ್ಯ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್ ಮಾರ್ಗದರ್ಶನದಲ್ಲಿ ಪಡುಪೆರಾರ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ತಂಬಾಕುಮುಕ್ತ ಗ್ರಾಮ ಅಭಿಯಾನ ನಡೆಸುತ್ತಿದ್ದೇವೆ. ಗ್ರಾಮಸ್ಥರ ಪ್ರತಿಕ್ರಿಯೆ ಉತ್ತಮವಾಗಿದೆ. ಶ್ರುತಿ ಸಾಲ್ಯಾನ್ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆ