

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿಕ್ಕ ಮಕ್ಕಳು, ಯುವಕರು ತಂಬಾಕು ಉತ್ಪನ್ನಗಳಿಗೆ, ಬೀಡಿ, ಸಿಗರೇಟ ಸೇವನೆಗೆ ಅಂಟಿಕೊಳ್ಳದಂತೆ ನಗರ, ಗ್ರಾಮಗಳಲ್ಲಿ ಹೆಚ್ಚಿನ ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾದ್ಯಂತ 60 ದಿನಗಳ ಕಾಲ ತಂಬಾಕು ಮುಕ್ತ ಯುವ ಅಭಿಯಾನ ನಡೆಸಲಾಗುವುದು. 160 ಶಾಲೆ ಹಾಗೂ 20 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ವಿವಿಧ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಇಂದಿನ ದಿನಗಳಲ್ಲಿ ಯುವ ಸಮೂಹ ಹೆಚ್ಚು ತಂಬಾಕು ಸೇವನೆ, ಬೀಡಿ, ಸಿಗರೇಟು ಚಟಗಳಿಗೆ ಅಂಟಿಕೊಳ್ಳುತ್ತಿದ್ದು, ಗ್ರಾಮ ಸಭೆ, ಪಾಲಕರ ಸಭೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಅಭಿಯಾನ ನಡೆಸಬೇಕು ಎಂದರು.
ಜಿಲ್ಲೆಯಲ್ಲಿ ತನಿಖಾ ದಾಳಿಗಳನ್ನು ಹೆಚ್ಚಿಸಬೇಕು. ತಂಬಾಕು ಮುಕ್ತ ಬಾರ್ ರೆಸ್ಟೊರಂಟ್, ನೋ ಸ್ಮೊಕಿಂಗ್ ಜೋನ್ ಕುರಿತಂತೆ ಅಬಕಾರಿ ಅಕಾರಿಗಳು ಸೂಕ್ತ ಕ್ರಮ ಕೆಗೊಳ್ಳಬೇಕು. ಜನರು ರಸ್ತೆ, ಬೀದಿ, ಮಾರುಕಟ್ಟೆ ಸ್ಥಳಗಳಲ್ಲಿ ಸಿಗರೇಟು, ಬೀಡಿ ಸೇವನೆ ಮಾಡದಂತೆ ಫಲಕ ಅಳವಡಿಸಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆರ್ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಪರಶುರಾಮ ಎಸ್.ಕೆ., ಪಶುಸಂಗೋಪನೆ ಉಪ ನಿರ್ದೇಶಕ ಡಾ.ರವಿ ಸಾಲಿಗೌಡರ, ಅಬಕಾರಿ ಆಯುಕ್ತ ರಮೇಶ ಕುಮಾರ.ಎಚ್, ಇತರರು ಇದ್ದರು.