ವ್ಯಸನಿಗಳಾಗುತ್ತಿರುವ ಯುವ ಸಮೂಹ: ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಪ್ರದೀಪ್ ಆತಂಕ

1 (3)
Published on

ಮಂಡ್ಯ: ಯುವ ಸಮೂಹವೇ ಹೆಚ್ಚು ವ್ಯಸನಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನ ರಾಮಯ್ಯ ಇನ್ಸ್‌ಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಪ್ರದೀಪ್ ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಪಿಇಎಸ್ ಕಾನೂನು ಕಾಲೇಜು, ರಾಷ್ಟ್ರೀಯ ಸೇವಾ ಘಟಕ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಭಯೋತ್ಪಾದನೆ ವಿರೋಧಿ ದಿನ ಮತ್ತು ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಸಾವಿಗೀಡಾಗುವವರಲ್ಲಿ ಶೇ.60ರಷ್ಟು ಜನ 30 ರಿಂದ 35 ವರ್ಷದೊಳಗಿನವರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಇಡೀ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ತಂಬಾಕು ಸಿಗುವುದು ಭಾರತದಲ್ಲಿ ಮಾತ್ರ. ಹುಣಸೂರಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಗುಣಮಟ್ಟದ ತಂಬಾಕು ಎಚ್.ಡಿ.ಕೋಟೆಯಲ್ಲಿ ಬೆಳೆಯಲಾಗುತ್ತದೆ. ಇಂಡಿಯನ್ ಟೋಬ್ಯಾಕೋ ಕಾಯ್ದೆ ಪ್ರಕಾರ ಬೆಳಗಾವಿಯ ನಿಪ್ಪಾಣಿಯಲ್ಲಿ ಅತಿ ಉತ್ಕೃಷ್ಟವಾದ ತಂಬಾಕನ್ನು ಬೆಳೆದು ಅಲ್ಲಿನ ಜನ ಮಾತ್ರ ಉಪಯೋಗಿಸುತ್ತಾರೆ. ಆಂಧ್ರದ ಗುಂಟೂರು ಜಿಲ್ಲೆ ಅತಿ ಹೆಚ್ಚು ತಂಬಾಕು ಬೆಳೆಯುವ ಪ್ರದೇಶವಾಗಿದೆ. ಛತ್ತೀಸ್‌ಘಡದಲ್ಲಿ ಅತಿ ಹೆಚ್ಚು ತಂಬಾಕು ಉತ್ಪನ್ನಗಳನ್ನು ಉಪಯೋಗಿಸಲಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಅತಿ ಕಡಿಮೆ ತಂಬಾಕು ಉತ್ಪನ್ನಗಳನ್ನು ಬಳಸಲಾಗುತ್ತದೆ. ಮಿಜೋರಾಂನಲ್ಲಿ ಅತಿ ಹೆಚ್ಚು ಅಂದರೆ ಶೇ. 15.1ರಷ್ಟು ಮಹಿಳೆಯರು ತಂಬಾಕು ಬಳಸುತ್ತಾರೆ ಎಂದು ವಿವರಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ಜೆ.ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಎಂ.ಎಸ್.ಯಮುನಾವತಿ, ಡಾ.ಕೆ.ಎಸ್.ಜಯಕುಮಾರ್, ಎನ್.ಸಿ.ಸುಭಾಷ್, ಎಂ.ಪಿ.ಪ್ರಮೋದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net