

ಎನ್.ಆರ್.ಪುರ: ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸಿ ಉತ್ತಮ ಆರೋಗ್ಯವಂತ ಜೀವನ ನಡೆಸಬೇಕು ಎಂದು ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಪೊಲೀಸ್ ಇಲಾಖೆ, ಪಪಂ, ಆರೋಗ್ಯ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ನೀಡಬಾರದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು. ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಬೀಡಿ, ಸಿಗರೇಟ್, ಗುಟ್ಕಾ ಸೇವೆಗೆಯಿಂದ ಆರೋಗ್ಯ ಹಾಳು ಮಾಡಿಕೊಂಡಿರುವ ಕುಟುಂಬಗಳ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತಂಬಾಕು ಉತ್ಪನ್ನಗಳನ್ನು ತ್ಯಜಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದರು.
ಎಎಸ್‌ಐ ನಟರಾಜ್ ಮಾತನಾಡಿ, ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ಧೂಮಪಾನ ನಿಷೇಧ ಹಾಗೂ 18ವಷರ್ದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂಬ ಸೂಚನಾ ಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಬಹಿರಂಗವಾಗಿ ತಂಬಾಕು ಉತ್ಪನ್ನಗಳನ್ನ ಪ್ರದರ್ಶಿಸುವುದು, ಸೇವಿಸಲು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಕಂದಾಯ ನಿರೀಕ್ಷಕ ವಿಜಯ್ ಕುಮಾರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಗೃಹ ರಕ್ಷಕ ಸಿಬ್ಬಂದಿ ಸುಜಾತ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಪ್ರೀತ, ಆಶಾ ಕಾರ್ಯಕರ್ತೆ ಕುಸುಮ ವಾಹನ ಚಾಲಕ ಸುಹಾಸ್, ಸಂದೀಪ ಮತ್ತಿತರು ಇದ್ದರು.