ತಂಬಾಕು ಸೇವನೆಯಿಂದ ಹಾನಿ ಅಪಾರ

01Jaggu5
ಬೆಳಗಾವಿಯದಲ್ಲಿ ಆಯೋಜಿಸಿದ್ದ ತಂಬಾಕು ಹಾಗೂ ಅದರ ದುಷ್ಪರಿಣಾಮ ಮತ್ತು ಸ್ಟಾಪ್ ಟೊಬ್ಯಾಕೋ ಆ್ಯಪ್ ತರಬೇತಿ ಕಾರ್ಯಾಗಾರ ಉದ್ಘಾಟಿಸಲಾಯಿತು. ಡಾ.ಎಸ್.ಎಸ್. ದೊಡ್ಡಮನಿ, ಕವಿತಾ ರಾಜನ್ನವರ, ಆಶಾ ಹಿರೇಮಠ ಇತರರಿದ್ದರು.
Published on

ಬೆಳಗಾವಿ: ತಂಬಾಕು ಸೇವನೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಂಬಾಕು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎಸ್.ಎಸ್.ದೊಡ್ಡಮನಿ ಹೇಳಿದರು.

ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶನಿವಾರ ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಹಾಗೂ ಇಲಾಖೆಯ ವೃತ್ತಿಪರರಿಗೆ ‘ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮ ಹಾಗೂ ಸ್ಟಾಪ್ ಟೊಬ್ಯಾಕೋ ಆ್ಯಪ್’ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಿಗರೇಟು ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯದ ಮೇಲೂ ಸಮಸ್ಯೆ ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಭವಿಸುವ ಎಲ್ಲ ಅಸಾಂಕ್ರಾಮಿಕ ರೋಗಗಳಿಗೆ ತಂಬಾಕು ಸೇವನೆ ಮುಖ್ಯ ಕಾರಣವಾಗಿದೆ ಎಂದರು.

ಬೆಳಗಾವಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಕವಿತಾ ರಾಜನ್ನವರ, ಕೋಟ್ಪಾ-2003 ಉಲ್ಲಂಘನೆಯನ್ನು ಸಾರ್ವಜನಿಕರಿಂದ ವರದಿ ಮಾಡಲು ರಾಜ್ಯ ತಂಬಾಕು ನಿಯಂತ್ರಣ ಘಟಕದಿಂದ ‘ಸ್ಟಾಪ್ ಟೊಬ್ಯಾಕೋ ಆ್ಯಪ್’ ಬಿಡುಗಡೆಗೊಳಿಸಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹಾಗೂ ಪ್ರಚಾರಪಡಿಸಬೇಕು. ಈ ಆ್ಯಪ್ ಮೂಲಕ ಉಲ್ಲಂಘನೆ ತಡೆಯಲು ಸ್ಥಳದಲ್ಲೇ ಫೋಟೋ ತೆಗೆದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವರದಿ ಮಾಡಬಹುದು. ವರದಿ ಮಾಡಿದ ಸಾರ್ವಜನಿಕರ ದೂರನ್ನು ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ಕಳುಹಿಸುವ ಕುರಿತಂತೆ ಆ್ಯಪ್ ಬಗ್ಗೆ ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಬಾಲಸ್ವಸ್ಥ ಕಾರ್ಯಕ್ರಮದ ವೈದ್ಯಾಧಿಕಾರಿ ಆಶಾ ಹಿರೇಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net