

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅಡಗೂರು ಗ್ರಾಮದಲ್ಲಿ ಬುಧವಾರ ತಂಬಾಕು ಬ್ಯಾರನ್ ಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ತಂಬಾಕು ಎಲೆಗಳು ನಾಶವಾಗಿವೆ.
ಗ್ರಾಮದ ರೈತ ಆನಂದ ಅವರ ಬ್ಯಾರನ್ ನಲ್ಲಿ ತಂಬಾಕು ಎಲೆಗಳನ್ನು ಹದ ಮಾಡುವ ಸಂದರ್ಭ ಬೆಳಗಿನ ಜಾವ 4 ಗಂಟೆಯಲ್ಲಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕ ಪಕ್ಕದ ಮನೆಯವರು ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟರು.
ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮಾತನಾಡಿ, ರೈತ ಆನಂದ್ ಕುಟುಂಬದವರು ಬಡವರಾಗಿದ್ದು, ಅವರು ಬೆಳೆದ ತಂಬಾಕು ಎಲೆಗಳನ್ನು ಬ್ಯಾರನ್ ಮನೆಯಲ್ಲಿ ಹದ ಮಾಡುವ ವೇಳೆ 350 ಕೆ.ಜಿ.ಗೂ ಹೆಚ್ಚು ತಂಬಾಕು ಹಾಗೂ ಮನೆ ನಾಶವಾಗಿದೆ. ಇದರಿಂದ ನಷ್ಟ ಉಂಟಾಗಿದೆ. ತಂಬಾಕು ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.