

ವಿದ್ಯಾರ್ಥಿ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸಿದರೆ ಮಾತ್ರ ದುಶ್ಚಟಗಳಂತಹ ಸಾಮಾಜಿಕ ಪಿಡುಗುಗಳು ನಿವಾರಣೆಯಾಗುತ್ತದೆ ಎಂದು ಕುಶಾಲನಗರ ಟೌನ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಜಿ. ಪ್ರಕಾಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಶುಕ್ರವಾರ ನಡೆದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ದುಶ್ಚಟಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು.
ಕಾಲೇಜು ದಿನಗಳಲ್ಲಿ ದುಶ್ಚಟಗಳಿಗೆ ಆಕರ್ಷಣೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಿಗರೇಟ್, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥ ಸೇವಿಸುವುದನ್ನು ತ್ಯಜಿಸಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್. ಚಂದ್ರಮೋಹನ್ ಮಾತನಾಡಿ, ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಮಾದಕವಸ್ತು ಸೇರಿದಂತೆ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವಂತಹ ಯಾವುದೇ ಚಟಗಳ ಆಕರ್ಷಣೆಗೆ ಒಳಗಾಗದೆ ದೂರವಿರಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಡಾ. ನಾಗೇಂದ್ರಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ನಾಗರಾಜು, ಸೇವಾ ಪ್ರತಿನಿಧಿ ಜಯಲಕ್ಷ್ಮಿ ಮತ್ತಿತರರು ಇದ್ದರು.