

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಮಾಂಗಲ್ಯ ಧಾರಣೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಸಂಪ್ರದಾಯದಂತೆ, ಸವದತ್ತಿ ತಾಲೂಕಿನ ಹರಳಕಟ್ಟಿ ಗ್ರಾಮಸ್ಥರು ದೇವಿಗೆ ಮುತ್ತೈದೆತನದ ಸಂಕೇತಗಳಾದ ಸೀರೆ, ಕುಪ್ಪಸ, ಅರಿಶಿಣ-ಕುಂಕುಮ, ಹಸಿರು ಬಳೆ, ದಂಡಿ ಮಾಲೆ ಹಾಗೂ ಉಡಿ ತುಂಬುವ ಸಾಮಗ್ರಿ ನೀಡಿದರು.
ಪ್ರತಿ ವರ್ಷವೂ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ಆದರೆ, ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ದೇವಸ್ಥಾನದ ಅರ್ಚಕರು, ಅಧಿಕಾರಿಗಳು ಹಾಗೂ ಕೆಲವೇ ಹಿರಿಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ- ವಿಧಾನ ನೆರವೇರಿದವು.
ಉಪಸಭಾಪತಿ ಆನಂದ ಮಾಮನಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಪರಸನಗೌಡ ಚವನಗೌಡರ ಇತರರು ಇದ್ದರು.