

ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ
ಇಲ್ಲಿಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆಗೆ ಆ.19ರಂದು ಚುನಾವಣೆ ನಿಗದಿಯಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.
ಸ್ಥಳೀಯ ರಾಜಕಾರಣಿಗಳಿಗೆ ಪುರಸಭೆ ಅಧ್ಯಕ್ಷ ಸ್ಥಾನ ಭವಿಷ್ಯದ ರಾಜಕೀಯ ನೆಲೆ ಕಲ್ಪಿಸಿದೆ. ಈ ಹಿಂದೆ ಪುರಸಭೆ ಅಧ್ಯಕ್ಷ ಗದ್ದುಗೆ ಏರಿದ್ದ ಒಬ್ಬರನ್ನು ವಿಧಾನಸೌಧಕ್ಕೂ ಕಳುಹಿಸಿದ್ದರೆ, ಮತ್ತೊಬ್ಬರನ್ನು ನಿಗಮ ಮಂಡಳಿ ಸೇರಿದಂತೆ ಕ್ಯಾಬಿನೆಟ್ ದರ್ಜೆ ಹುದ್ದೆಯವರೆಗೂ ತಲುಪಿಸಿದೆ. ಹೊಸದಾಗಿ ರಾಜಕಾರಣಕ್ಕೆ ಆಗಮಿಸುವ ಬಹುತೇಕರಿಗೆ ಪುರಸಭೆ ರಾಜಕೀಯ ವೇದಿಕೆಯಾಗಿದೆ.
ಪುರಸಭೆಯ ಒಟ್ಟು 23 ಸದಸ್ಯರ ಪೈಕಿ 17 ಬಿಜೆಪಿ ಹಾಗೂ 6 ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಪೈಕಿ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ಚಂದ್ರಪ್ಪ ಶೆಟ್ಟರ, ಶಿವಯೋಗಿ ಅಂಗಡಿ, ವಿನಯ ಹಿರೇಮಠ ಇತರರಿಗೆ ಅವಕಾಶವಿದ್ದರೂ ಮಾಜಿ ಶಾಸಕರ ಪುತ್ರ ಬಾಲಚಂದ್ರಗೌಡ್ರ ಆಯ್ಕೆ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಮಾಜಿ ಶಾಸಕ ಮಾಳಗಿ ಮರಿಯಪ್ಪನವರ ಮೊಮ್ಮಗ ಸುಭಾಸ ಮಾಳಗಿ ಹಾಗೂ ಫಕೀರಮ್ಮ ಛಲವಾದಿ ಇದ್ದಾರೆ. ಆದರೆ, ಸುಭಾಸ ಮಾಳಗಿ ಆಯ್ಕೆಗೆ ಒಲವು ಇದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನ 6 ಸದಸ್ಯರಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕಂಡುಬಂದಿಲ್ಲ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ವಕೀಲ ಶಂಕರ ಕುಸಗೂರ ಪ್ರಯತ್ನ ನಡೆಸಿದ್ದಾರೆ.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಕೂಡ ಹಿಂದೆ ಪುರಸಭೆ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಬಳಿಕ ಬ್ಯಾಡಗಿ ಮತಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಅವರ ಪುತ್ರ ಬಾಲಚಂದ್ರಗೌಡ್ರ ಪಾಟೀಲ ಮೊದಲ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ, ಸ್ಥಾಯಿ ಸಮಿತಿ ಚೇರ್ಮನ್ನರಾಗಿ ಆಯ್ಕೆಯಾಗಿದ್ದರು. ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಮೀಸಲಾತಿ ಗೊಂದಲಕ್ಕೆ ತೆರೆಬಿದ್ದಿದ್ದು, ಆಯ್ಕೆ ಪ್ರಕ್ರಿಯೆ ಸರ್ವ ಸದಸ್ಯರಿಗೆ ಸಂತಸ ಮೂಡಿಸಿದೆ.
ಕಳೆದ ಬಾರಿ ಕೈತಪ್ಪಿದ ಅವಕಾಶ
2020ರಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಬಳಿಕ ಎರಡೂ ಸ್ಥಾನಗಳು ಬದಲಾದವು. ಆಗ ಮಾಜಿ ಶಾಸಕರ ಪುತ್ರಗೆ ಅವಕಾಶ ಕೈತಪ್ಪಿತ್ತು. ಪುನಃ ಆ ಭಾಗ್ಯ ಒಲಿದು ಬಂದ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಡಗಿಯ ಗೌಡ್ರ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯಲ್ಲಿ ಸ್ಪಷ್ಟ ಬಹುಮತವಿದೆ. ಈಗಾಗಲೇ ಪಕ್ಷದ ಕಚೇರಿಯಲ್ಲಿ ಆಕಾಂಕ್ಷಿಗಳ ಅರ್ಜಿಗಳನ್ನು ಅಧ್ಯಕ್ಷ ಶಿವಯೋಗಿ ಶಿರೂರು ಪಡೆದಿದ್ದು, ಆ. 19ರಂದು ಮಾಜಿ ಶಾಸಕರು, ಪಕ್ಷದ ಹಿರಿಯರು ಸಭೆ ಸೇರಿ ಇಬ್ಬರು ಅಭ್ಯರ್ಥಿಗಳ ಹೆಸರು ಘೊಷಣೆ ಮಾಡಲಿದ್ದಾರೆ.