

ಅಥಣಿ: ಭಾರತೀಯ ಸಂಸ್ಕೃತಿ, ಆಚಾರ ಹಾಗೂ ಅನುಭಾವಗಳನ್ನು ಯುವ ಪೀಳಿಗೆಗೆ ತಲುಪಿಸಲು ಶರಣ ಸಂಸ್ಕೃತಿ ಸಹಕಾರಿಯಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಮೋಟಗಿಮಠದ ಶ್ರೀ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಾದಿ ಶಿವಶರಣರ ವಚನ ಸಾಹಿತ್ಯ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ ಮಹತ್ವವಾಗಿದೆ. ಎಲ್ಲಡೆ ವಚನ ಸಾಹಿತ್ಯ ಸಾರುವುದೇ ಶರಣ ಸಂಸ್ಕೃತಿ ಆಶಯವಾಗಿದೆ. ಆಧುನಿಕತೆ ಅಬ್ಬರದಲ್ಲಿ ಸಂಸ್ಕೃತಿ, ಪರಂಪರೆ ಮರೆಯಾಗಬಾರದು ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶತಮಾನಗಳಿಂದ ನಾಡು, ನುಡಿ ಹಾಗೂ ಸಂಸ್ಕೃತಿ ಉಳವಿಗಾಗಿ ಮೋಟಗಿಮಠ ಶ್ರಮಿಸುತ್ತಿದೆ. ಚನ್ನಬಸವ ಶಿವಯೋಗಿಗಳು ಪರಂಜ್ಯೋತಿಯಾಗಿ ಎಲ್ಲರ ಬದುಕಿಗೆ ಬೆಳಕಾಗಿದ್ದಾರೆ. ಅವರು ತೋರಿದ ಪಥದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ತಿಳಿಸಿದರು.
ಪಲ್ಲಕ್ಕಿ ಉತ್ಸವ: ಶ್ರೀ ಮಠದ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿತು. ಬಸವಾದಿ ಶಿವಶರಣರು ಹಾಗೂ ಪೂಜ್ಯರ ಭಾವಚಿತ್ರ, ಮೂರ್ತಿಯ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯಗಳೊಂದಿಗೆ ಜರುಗಿತು.
ಪ್ರಭುಚನ್ನಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಡಾ.ಮಹಾಂತ ಪ್ರಭುಸ್ವಾಮೀಜಿ, ಕಾಶಿನಾಥ ಸ್ವಾಮೀಜಿ, ಪ್ರಭುಕುಮಾರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ಗುರುದೇವ ದೇವರು, ವಿರೇಶ್ವರ ದೇವರು, ಮುಕ್ತಾಯಿ ಮಹಿಳಾ ಬಳಗ, ಚನ್ನಬಸವ ಯುವಕ ಸಂಘ ಹಾಗೂ ಅಥಣೀಶ ಯುವ ವೇದಿಕೆ ಸದಸ್ಯರು ಪಾಲ್ಗೊಂಡಿದ್ದರು.