ಗಾಳಿ-ಮಳೆಗೆ ಹಾರಿದ ಶೆಡ್

27 KPL RAVI 01
ಕೊಪ್ಪಳ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಭಾನುವಾರ ಗಾಳಿ-ಮಳೆಗೆ ಮನೆ ಛಾವಣಿ ಹಾರಿ ಹೋಗಿರುವುದು.
Published on

ಕೊಪ್ಪಳ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಭಾನುವಾರ ಸಂಜೆ ವರುಣ ಆರ್ಭಟಿಸಿದ್ದು, ಗಾಳಿ-ಮಳೆಗೆ ಅಪಾರ ಹಾನಿಯಾಗಿದೆ. ತಾಲೂಕಿನ ಅಬ್ಬಿಗೇರಿಯಲ್ಲಿ ಹಲವೆಡೆ ವಿದ್ಯುತ್ ಕಂಬ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ತಂತಿಗಳು ಮನೆ, ಅಂಗಡಿ, ಬೀದಿಯಲ್ಲಿ ಹರಿದು ಬಿದ್ದಿವೆ.

ಮಳೆ ಆರಂಭವಾಗುತ್ತಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಗಿಡ-ಮರಗಳು ಮುರಿದು ಬಿದ್ದಿದ್ದು, ಯಮನೂರಬೀ ಅವರ ಮನೆ ತಗಡುಗಳು ಗಾಳಿಗೆ ಹಾರಿ ಹೋಗಿವೆ. ಜಮೀನಿನಲ್ಲಿದ್ದ ಗುಡಿಸಲು ಕಿತ್ತು ಹೋಗಿವೆ. ನಿವಾಸಿಗಳು ಮಳೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮನೆಯಲ್ಲಿ ನೀರು ಹೊಕ್ಕಿದ್ದು, ವಸ್ತುಗಳೆಲ್ಲ ನೆನೆದಿವೆ. ಮಳೆ ನಡುವೆಯೂ ಅಗತ್ಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ಜನ ಪರದಾಡಿದರು.

ಕೊಪ್ಪಳ ನಗರ ಸೇರಿ ಇತರೆಡೆ ಸಣ್ಣದಾಗಿ ಮಳೆ ಸುರಿದಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು ರೈತಾಪಿ ವರ್ಗಕ್ಕೆ ಹರುಷ ಮೂಡಿಸಿದೆ. ಜಮೀನುಗಳ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ವಿದ್ಯುತ್ ಕಂಬಗಳು ಹಾನಿಯಾಗಿದ್ದು ಮಳೆ ನಿಂತರೂ ವಿದ್ಯುತ್ ಇಲ್ಲದೇ ಕತ್ತಲಿನಲ್ಲೇ ರಾತ್ರಿ ಕಳೆಯುವಂತಾಗಿದೆ.

ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳಬೇಕು. ಮುರಿದ ಕಂಬ, ಮರದ ರೆಂಬೆ, ಕೊಂಬೆ ತೆರವು ಮಾಡಬೇಕು. ರಸ್ತೆ ದುರಸ್ತಿ ಮಾಡಿಸಿ ಸುಗಮ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಾನಿಗೀಡಾದ ಜನರಿಗೆ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net