

ಸಿಂಧನೂರು: ಲಿಂ.ಚನ್ನಬಸವ ಶ್ರೀಗಳು ಉತ್ತಮ ಕಾರ್ಯಗಳ ಮೂಲಕ ಜನರ ಪ್ರೀತಿಗಳಿಸಿದ್ದರು. ಎಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದಲ್ಲಿ ಭಾನುವಾರ ದಾಸೋಹ ಮೂರ್ತಿ ಲಿಂ.ಚನ್ನಬಸವ ಶಿವಯೋಗಿಗಳ 41ನೇ ಪುಣ್ಯಸ್ಮರಣೆ, ಶಿವಯೋಗಿಗಳವರ ನಾಮಾವಳಿ, ಸಿದ್ಧಲಿಂಗ ಸ್ವಾಮೀಜಿ ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಯೋಗಿಗಳು ಜನರಿಗೆ ಉತ್ತಮ ಮಾರ್ಗದರ್ಶನ ನೀಡಿ, ಅವರ ಜೀವನ ಹಸನಗೊಳಿಸಿದ್ದಾರೆ. ಸುವರ್ಣಗಿರಿ ವಿರಕ್ತಮಠ ಈ ಭಾಗದಲ್ಲಿ ಶ್ರೇಷ್ಠ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಶ್ರೀಮಠಕ್ಕೆ ಬಂದು ತಾತನವರನ್ನು ಸ್ಮರಿಸಿದರೆ, ಬಂದ ಸಂಕಷ್ಟ ದೂರಾಗುತ್ತವೆ. ಸ್ವಸ್ಥ ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಮಾತನಾಡಿ, ಜನರ ಬದುಕಿಗೆ ಉತ್ತಮ ದಾರಿ ತೋರಿಸಿ ಮುಕ್ತಿಯೆಡೆಗೆ ಕೊಂಡೊಯ್ಯುವ ಕೆಲಸ ಮಠ ಮಾಡುತ್ತಿದೆ. ಲಿಂ.ಚನ್ನಬಸವ ಶಿವಯೋಗಿಗಳ ಬದುಕು ಆದರ್ಶಮಯವಾಗಿದ್ದು ಬರಿಗಾಲಲ್ಲಿ ನಡೆದು ಪುಣ್ಯ ಭೂಮಿಯನ್ನಾಗಿಸಿದ್ದಾರೆ ಎಂದು ತಿಳಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸುವರ್ಣಗಿರಿ ವಿರಕ್ತಮಠದ ಪರಂಪರೆ ದೊಡ್ಡದಿದೆ. ಈ ಭಾಗದಲ್ಲಿ ಜನರ ಬದುಕಿಗೆ ನೆರಳಾಗಿ ನಿಲ್ಲುವ ಮಠದ ಕಾರ್ಯ ಶ್ಲಾಘನೀಯವಾಗಿದೆ. ಲಿಂ. ಚನ್ನಬಸವ ಶಿವಯೋಗಿ, ಸಿದ್ಧಲಿಂಗ ಸ್ವಾಮೀಜಿ ಮಠವನ್ನು ಬೆಳಕಾಗಿಸಿದ್ದಾರೆ ಎಂದರು.
ಉಪನ್ಯಾಸಕಿ ಮೀನಾಕ್ಷಿ ಖಂಡಿಮಠ ಮಾತನಾಡಿದರು. ಜಮಖಂಡಿ ಡಾ.ಅಭಿನವ ಚನ್ನಬಸವ ಸ್ವಾಮೀಜಿ, ಅಡವಿ ಅಮರೇಶ್ವರ ಮಠದ ಶಾಂತಮಲ್ಲ ಸ್ವಾಮೀಜಿ, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಚಮ ಸಿದ್ಧಲಿಂಗ ಸ್ವಾಮೀಜಿ, ದರೂರು ಕೊಟ್ಟೂರು ಸ್ವಾಮೀಜಿ, ವಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಅಮರೇಶ್ವರ ತೋಂಟದಾರ್ಯ ಸ್ವಾಮೀಜಿ, ಶಿವರಾಜಶಾಸ್ತ್ರೀ ಹಚ್ಚೊಳ್ಳಿ, ಚಂದ್ರಶೇಖರ ದೇವರು, ಲಿಂಗರಾಜಗೌಡ, ನಾಗರಾಜಗೌಡ, ಸುಗೂರಯ್ಯಸ್ವಾಮಿ, ಸತ್ಯನಗೌಡ ಒಳಬಳ್ಳಾರಿ ಇದ್ದರು.