

ಕಾನಹೊಸಹಳ್ಳಿ: 12ನೇ ಶತಮಾನದಲ್ಲಿ ಬಸವಣ್ಣನವರ ಜತೆಗೂಡ ಕಾಯಕ ಮತ್ತು ವಚನಗಳೊಂದಿಗೆ ಸಮಾಜಕ್ಕೆ ಸಂದೇಶ ಸಾರುವಲ್ಲಿ ಹಡಪದ ಅಪ್ಪಣ್ಣ ಶ್ರಮಿಸಿದ್ದಾರೆ ಎಂದು ಉಪನ್ಯಾಸಕ ಶಶಿಧರ ಉಬ್ಬಳಗಂಡಿ ಹೇಳಿದರು.
ಸಮೀಪದ ಹಾರಕಬಾವಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ 889ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಜಾತಿಯಿಂದ ಶ್ರೇಷ್ಠನಾಗದ ಅಪ್ಪಣ್ಣ ಕಾಯಕ ಮತ್ತು ವಚನಗಳನ್ನು ಸಾರುವ ಮೂಲಕ ದೊಡ್ಡವರಾಗಿದ್ದಾರೆ. ಹಡಪದ ಸಮುದಾಯ ಸಂಘಟನೆಯಾಗುವ ಮೂಲಕ ಅಪ್ಪಣ್ಣ ಹೆಸರನ್ನು ರಾಜ್ಯ ಮತ್ತು ದೇಶಾದ್ಯಂತ ಪಸರಿಸುವಂತಾಗಬೇಕು ಎಂದರು.
ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣ ಕಟ್ಟಿದ ಅನುಭವ ಮಂಟಪದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶರಣರ ಬಳಗ ಪಣ ತೊಟ್ಟಿತ್ತು. ಅನುಭವ ಮಂಟಪದಲ್ಲಿದ್ದ ಅಪ್ಪಣ್ಣ ಬಸವಣ್ಣರ ಆಪ್ತ ಸಹಾಯಕರಾಗಿದ್ದರು. ದುಡಿಮೆಯಲ್ಲಿ ಆರೋಗ್ಯವಿದೆ ಎಂಬುದನ್ನು ಶರಣರು ಅರಿತಿದ್ದರಿಂದ ಕಾಯಕವೇ ಕೈಲಾಸ ಎಂದು ಸಾರಿದರು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಹಡಪದ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಹಡಪದ ಅಪ್ಪಣ್ಣ ಭಾವಚಿತ್ರದ ಮೆರವಣಿಗೆ ನಡೆಯಿತು. ಕೆಎಂಎಫ್ ನಿವೃತ್ತ ಅಧಿಕಾರಿ ಎಚ್.ಮರುಳಸಿದ್ದಪ್ಪ ಮಾತನಾಡಿದರು. ತಾಪಂ ಮಾಜಿ ಸದಸ್ಯ ಎಚ್..ಶೇಖರಪ್ಪ, ಬಸವರಾಜ, ಕರೇಗೌಡ, ಕೊಟ್ರೇಶ್, ಸಮುದಾಯದ ತಾಲೂಕು ಅಧ್ಯಕ್ಷ ಚೌಡಪ್ಪ, ಜಿಲ್ಲಾಧ್ಯಕ್ಷ ಮಲ್ಲಪ್ಪ, ಜಿಲ್ಲಾ ಪ್ರ.ಕಾರ್ಯದರ್ಶಿ ಬಾಗಳಿ ಕೊಟ್ರೇಶ್,ಎಚ್.ಸಿದ್ದೇಶ್, ಗ್ರಾಪಂ ಅಧ್ಯಕ್ಷೆ ಎಸ್.ಬಸಮ್ಮ ಮಂಜುನಾಥ, ಪ್ರಮುಖರಾದ ಗಂಗಮ್ಮ, ನಾಗರಾಜ ಇತರರಿದ್ದರು.