

ಯಲಬುರ್ಗಾ: ಕೃಷ್ಣಾ ಬಿಸ್ಕೀಂ ನೀರಾವರಿ ಭಾಗವಾಗಿರುವ ಕೆರೆ ತುಂಬಿಸುವ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರಲಾರಂಭಿಸಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ವಷರ್ ಬಿಜೆಪಿ ಸರ್ಕಾರದಲ್ಲಿ ಗಣಿ ಸಚಿವರಾಗಿದ್ದ ಹಾಲಪ್ಪ ಆಚಾರ್ ಅಧಿಕಾರಾವಧಿಯಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಏಳೆಂಟು ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಕೆಲ ಸಣ್ಣ ಪುಟ್ಟ ಕಾಮಗಾರಿ ಪೂರ್ಣವಾಗದೇ ಇನ್ನುಳಿದ ಕೆರೆಗಳಿಗೆ ನೀರು ಹರಿಸುವುದು ವಿಳಂಬವಾಗಿತ್ತು. ಮುಂಗಾರು ಹಂಗಾಮಿನಲ್ಲಿ ಸತತ ಮಳೆಯಿಂದ ಆಲಮಟ್ಟಿ ಆಣೆಕಟ್ಟು ತುಂಬಿ, ಹೆಚ್ಚುವರಿ ನೀರು ನದಿಗೆ ಬಿಡಲಾಗಿತ್ತು. ವ್ಯರ್ಥ ನೀರು ತಾಲೂಕಿನ ಕೆರೆಗಳಿಗೆ ಹರಿಸುವಂತೆ ರೈತರು ಒತ್ತಾಯಿಸಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆಯ ಕೆಲ ಕಾಮಗಾರಿ ಕಳಪೆಯಿಂದ ಕೂಡಿದೆ. ಹೀಗಾಗಿ ಅನುಷ್ಠಾನ ವಿಳಂಬವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಆರೋಪಿಸಿ ಆ.10ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
2018ರಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯಿಂದ ಹುನಗುಂದ, ಕುಷ್ಟಗಿ, ಬದಾಮಿ, ರೋಣ, ಯಲಬುರ್ಗಾ, ಕನಕಗಿರಿ ಹಾಗೂ ಕೊಪ್ಪಳ ತಾಕೂಕಿನ 76 ಕೆರೆ ತುಂಬಿಸುವ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಯೊಜನೆಗೆ ಅನುಮೋದನೆ ನೀಡುವಂತೆ ಡಿಕೆಶಿಗೆ ಮನವಿ ಮಾಡಲಾಗಿತ್ತು.
ನಂತರ ಬಿಜೆಪಿ ಸರ್ಕಾರದಿಂದ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿತ್ತು.
ಕೆಬಿಜೆಎನ್‌ಎಲ್‌ನಿಂದ ನಿರ್ವಹಿಸುವ ಯೋಜನೆಯ ಜಾಕ್‌ವೆಲ್-1ರಿಂದ ಜಾಕ್‌ವೆಲ್-2 ಹಾಗೂ ಜಾಕ್‌ವೆಲ್-3ರ ನಡುವೆ ಅಳವಡಿಸಿರುವ ಪೈಪ್‌ಲೈನ್, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಯೋಜನೆಗೆ ಬಳಸಿದ ವಸ್ತುಗಳು ಕಳಪೆಯಿಂದ ಕೂಡಿವೆ. ಯೋಜನೆಗೆ ಬಳಸಿದ ಕಳಪೆ ವಸ್ತು ತೆಗೆದು, ಗುಣಮಟ್ಟದ ಸಾಮಗ್ರಿ ಅಳವಡಿಸಬೇಕು. ಕಾಮಗಾರಿ ಕಳಪೆ ನಿರ್ವಹಣೆಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರಾಯರಡ್ಡಿ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು.
ಕಳಪೆ ಕಾಮಗಾರಿ ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಹರಿದು ಬರುವುದು ವಿಳಂಬವಾಗಿತ್ತು. ಇದನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು 10 ವಾರಗಳ ಕಾಲಾವಕಾಶ ಕೇಳಿದ್ದರು. ಈಗ ಸರಿಪಡಿಸಲಾಗಿದ್ದು, ಹಗೇದಾಳ ಹತ್ತಿರ ಇರುವ ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯ ಬ್ರ್ಯಾಂಚ್ ಮತ್ತು ಮುಖ್ಯಸ್ಥಾವರಕ್ಕೆ ನೀರು ಬಂದಿದೆ. ಅಲ್ಲಿಂದ ಪಟ್ಟಣದ ಕೆಂಪು ಕೆರೆ, ತಾಲೂಕಿನ ಮಲಕಸಮುದ್ರ, ಕುದ್ರಿಕೊಟಗಿ, ಬಸಾಪುರ-ಬಳೂಟಗಿ ಹಾಗೂ ತಲ್ಲೂರು ಕೆರೆಗೆ ನೀರು ಹರಿಯುತ್ತಿದೆ. ಸತತ ಬರಗಾಲಕ್ಕೆ ತುತ್ತಾಗುವ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ವರದಾನವಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ಜನ-ಜಾನುವಾರುಗಳಿಗೆ ಅನುಕೂಲವಾಗುವುದಲ್ಲದೇ ರೈತರ ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಗೆ ಕಾರಣವಾಗಲಿದೆ. ನೀರು ಹರಿದು ಬಂದಿದ್ದರಿಂದ ರೈತರಲ್ಲಿ ಹರ್ಷ ಮೂಡಿಸಿದೆ.
ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯ ಭಾಗವಾಗಿರುವ ಕೆರೆ ತುಂಬಿಸುವ ಪೈಪ್‌ಲೈನ್ ಕಾಮಗಾರಿ ಕಳಪೆ ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟಿದ್ದರಿಂದ ತಾಲೂಕಿನ ಕೆರೆಗಳಿಗೆ ನೀರು ಬರುವಲ್ಲಿ ವಿಳಂವಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಕೆರೆ ತುಂಬುವುದರಿಂದ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ. ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಕೆರೆಗೆ ನೀರು ಹರಿದು ಬಂದಿದ್ದು ಸಂತಸ ತರಿಸಿದೆ.ಬಸವರಾಜ ರಾಯರಡ್ಡಿ ಸಿಎಂ ಆರ್ಥಿಕ ಸಲಹೆಗಾರ.
ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆಯಡಿ ತಾಲೂಕಿನ 24 ಕೆರೆಗಳು ತುಂಬಲಿವೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ಸ್ ದುರಸ್ತಿ ಮಾಡಲಾಗಿದ್ದು, ಹಗೇದಾಳ ಹತ್ತಿರದ ಮುಖ್ಯಸ್ಥಾವರದಿಂದ ಪಟ್ಟಣದ ಕೆಂಪುಕೆರೆ, ಬಸಾಪುರ, ಕುದ್ರಿಕೊಟಗಿ, ಮಲಕಸಮುದ್ರ ಹಾಗೂ ತಲ್ಲೂರು ಕೆರೆಗೆ ನೀರು ಹರಿಯುತ್ತಿದೆ.ಚನ್ನಪ್ಪ ಎಇಇ ಕೆಬಿಜೆಎನ್‌ಎಲ್, ಯಲಬುರ್ಗಾ.