ಭಕ್ತರಿಗೆ ಜ್ಞಾನಸುಧೆ ನೀಡಿದ ಸಿದ್ಧೇಶ್ವರ ಶ್ರೀ

3Ainapur1
Published on

ಐನಾಪುರ: ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿಗಳು ನಾಡಿನೆಲ್ಲೆಡೆ ಸಂಚರಿಸಿ ಭಕ್ತರಿಗೆ ಜ್ಞಾನಸುಧೆ ಉಣಬಡಿಸಿದರು. ಜ್ಞಾನಯೋಗಾಶ್ರಮ ಸ್ಥಾಪಿಸಿ ವೇದಾಂತ ಕೇಸರಿ ಬಿರುದು ಪಡೆದು ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದು ಗದಗ ಶಿವಾನಂದ ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ನುಡಿದರು.

ಗ್ರಾಮದ ಕೃಷ್ಣಾಕಿತ್ತೂರ ಗುರುದೇವ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಶ್ರೀಗಳ ಅಮೃತ ಮಹೋತ್ಸವ ಹಾಗೂ ಬಸವೇಶ್ವರ ಶ್ರೀಗಳ ಗುರುಸ್ವೀಕಾರ ಸಮಾರಂಭದ ಜ್ಞಾನಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು.

ಮಲ್ಲಿಕಾರ್ಜುನ ಶಿವಯೋಗಿಗಳು 1948ರಲ್ಲಿ ಕೃಷ್ಣಾಕಿತ್ತೂರ ಗ್ರಾಮಕ್ಕೆ ಪದಾರ್ಪಣೆ ಮಾಡಿ ಅಧ್ಯಾತ್ಮದ ಸಿಂಚನ ನೀಡಿದರು. 40 ವರ್ಷಗಳ ಹಿಂದೆ ಸಿದ್ದೇಶ್ವರ ಶ್ರೀಗಳು ಸಹ ಪ್ರವಚನ ನೀಡಿ ಹಠಯೋಗ, ಜಪಯೋಗ ಹಾಗೂ ಧಾರ್ಮಿಕ ಸಂಸ್ಕಾರ ನೀಡಿ, ಗುರುದೇವ ಆಶ್ರಮಕ್ಕೆ ಶ್ರೇಷ್ಠ ಆಧ್ಯಾತ್ಮಿಕ ಗುರು ಬಸವೇಶ್ವರ ಶ್ರೀಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರು 25 ವರ್ಷಗಳಿಂದ ಮಕ್ಕಳಿಗೆ ಬಾಲ ಸಂಸ್ಕಾರ, ಜಪಯೋಗ, ಮಾಸಿಕ ಸತ್ಸಂಗ, ಭಜನೆ, ಲಲಿತ ಸಹಸ್ರನಾಮಾವಳಿ, ಪೂಜೆ ಪದ್ಧತಿ ಹಾಗೂ ಅನೇಕ ಧಾರ್ಮಿಕ ಸಂಸ್ಕಾರ ಕಲಿಸುತ್ತಿದ್ದಾರೆ ಎಂದರು.

ಡಾ.ಸತೀಶ ಜಾಧವ ಮಾತನಾಡಿ, ಉನ್ನತ ಜ್ಞಾನ ಪಡೆಯಲು ಗುರುವಿನ ಸನ್ನಿಧಾನದಲ್ಲಿ ಗುರುವಿನ ಗುಲಾಮನಾದರೆ ಮಾತ್ರ ನಿಜವಾದ ಜ್ಞಾನ ಪಡೆಯಲು ಸಾಧ್ಯ ಎಂದರು. ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹಾಗೂ ಬಸವೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಸಹಕಾರಿ ಅಧಿಕಾರಿ ಶಂಕರ ಕರಬಸಪ್ಪನವರ, ಅಶ್ವಿನಿ ಚೌಗಲಾ, ಶಿವಗೌಡ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net