

ಕೂಡ್ಲಿಗಿ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ( ಹುಚ್ಚವನಹಳ್ಳಿ ಮಂಜುನಾಥ ಬಣ) ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಶಿರಸ್ತೇದಾರ್ ಎಸ್.ಚಂದ್ರಶೇಖರ್‌ಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ (ಹುಚ್ಚವನಹಳ್ಳಿ ಮಂಜುನಾಥ ಬಣ) ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್ ಮಾತನಾಡಿ, ಆರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯಬದ್ಧ ಹಕ್ಕು ನೀಡಬೇಕು. ತಾಲೂಕಿನಲ್ಲಿ ತಿರಸ್ಕೃತಗೊಂಡ 16,110 ಅರ್ಜಿಗಳನ್ನು ಪರಿಷ್ಕರಿಸಿ ಪಟ್ಟ ನೀಡಬೇಕು ಎಂದು ಒತ್ತಾಯಿಸಿದರು.
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಭೂಮಿ ಮಂಜೂರಾತಿ ಸಮಿತಿ ರಚಿಸಿದ್ದರೂ ಸರಿಯಾಗಿ ಸಭೆ ನಡೆಸದೆ ಮಂಜೂರಾತಿ ಸಿಗುತ್ತಿಲ್ಲ. ಮಂಜೂರಾತಿಗೆ ಹತ್ತಾರು ಕಾನೂನು ತೊಡಕುಗಳು ಇವೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಊಳುವವನೇ ಭೂ ಒಡೆಯ ನೀತಿಯನ್ನು ಜಾರಿಮಾಡಿದಂತೆ ಸಾಮಾಜಿಕ ನ್ಯಾಯವನ್ನು ಪ್ರತಿ ಪಾದಿಸುವ ಕಾಂಗ್ರೆಸ್ ಸರ್ಕಾರ ದಶಕಗಳಿಂದ ಸಾಗುವಳಿ ಮಾಡುವ ರೈತರಿಗೆ ಫಾರ್ಮ್ 50, 53, 57 ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಪುರಸ್ಕರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಣದ ಕೃಷ್ಣ, ತಾಲೂಕು ಅಧ್ಯಕ್ಷ ಬಿ.ಮಾರುತಿ, ಉಪಾಧ್ಯಕ್ಷ ಬಿ.ಓಬಳೇಶ, ರೈತ ಮುಖಂಡರಾದ ಸಣ್ಣ ಗಾಳೆಪ್ಪ, ಬಿ.ನವೀನ್ ಕುಮಾರ, ಫಯಾಜ್, ಗೋವಿಂದಪ್ಪ, ಜಿ.ಮಾರಪ್ಪ, ಡಿ.ಸಂತೋಷ, ಓಬಳೇಶ, ಹರೀಶ, ಸಿದ್ದೇಶ, ಕಲ್ಲೇಶ ಇತರರಿದ್ದರು.