

ಗುಂಡೇವಾಡಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳ ಮೇಲೆ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.
ಸಮೀಪದ ಬೇವನೂರ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಮ್ಮಿ ಇಲ್ಲ. ಪಾಲಕರ ಸಹಕಾರದಿಂದ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಅಮಸಿದ್ಧ ಚೌಗಲಾ ಮಾತನಾಡಿ, ಗ್ರಾಮದಲ್ಲಿ ಪ್ರೌಢಶಾಲೆ ಅವಶ್ಯಕತೆ ಇದೆ. ಸರ್ಕಾರ ಪ್ರೌಢಶಾಲೆ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು. ಮಕ್ಕಳು ಶಿಕ್ಷಕರ ಮತ್ತು ಪಾಲಕರ ಪಾದಪೂಜೆ ಮಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಕೋತ, ಮಹಾಂತೇಶ ಕುಳ್ಳೋಳಿ, ಪ್ರಕಾಶ ನಾವಿ, ಅಬಕಾರಿ ವೃತ್ತ ನಿರೀಕ್ಷಕ ಮಹಾಂತೇಶ ಬಂಡಗರ. ಎನ್.ಎಂ.ಹಿರೇಮಠ, ಗ್ರಾಮದ ಹಿರಿಯರಾದ ಶಿವಾಜಿ ಯಮಗಾರ, ಮುಖ್ಯ ಶಿಕ್ಷಕ ವಿಲಾಸ ಪೆಡ್ನೆಕರ ಇತರರಿದ್ದರು. ವೈ.ಜಿ.ಚಂಬಾರ ವಾರ್ಷಿಕ ವರದಿ ಓದಿದರು. ಕುಮಾರ ಬಡಿಗೇರ ಸ್ವಾಗತಿಸಿದರು. ಪಿ.ಎಂ. ಸನದಿ ನಿರೂಪಿಸಿದರು. ಸಿದ್ದಗೌಡ ಪಾಟೀಲ ವಂದಿಸಿದರು.