

ಕಂಪ್ಲಿ: ಪಟ್ಟಣದಲ್ಲಿ ಗೋಶಾಲೆ ಆರಂಭದ ಪ್ರಕ್ರಿಯೆ ಕಡತಗಳಲ್ಲಿಯೇ ಉಳಿದಿದ್ದು, ಕಾರ್ಯರೂಪಕ್ಕೆ ಬರುತ್ತಿಲ್ಲ. ಹೀಗಾಗಿ ಬಿಡಾಡಿ ದನಗಳ ಉಪಟಳ ಹೆಚ್ಚುತ್ತಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.
ಕಳೆದ ವರ್ಷ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ಗೋಶಾಲೆ ತೆರೆಯಲು ಕ್ರಮವಹಿಸಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಕಂಪ್ಲಿ ಪಟ್ಟಣದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸರ್ವೇ ನಂಬರ್ 1464/ಬಿಯ ಐದು ಎಕರೆ ಭೂಮಿಯನ್ನು ಆಗಿನ ಡಿಸಿ ಪವನ್‌ಕುಮಾರ್ ಮಾಲಪಾಟಿ 2022ರ ಅಕ್ಟೋಬರ್‌ನಲ್ಲಿ ಮಂಜೂರು ಮಾಡಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು. ಆದರೆ, ಒಂಬತ್ತು ತಿಂಗಳು ಕಳೆದರೂ ಕಂಪ್ಲಿಯಲ್ಲಿ ಗೋಶಾಲೆ ಆರಂಭಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಪಟ್ಟಣದಲ್ಲಿ ಸುಮಾರು 70ಕ್ಕೂ ಹೆಚ್ಚು ಬಿಡಾಡಿ ದನಗಳಿವೆ. ಪ್ರತಿ ಸಲ ಪುರಸಭೆ ಸಭೆಯಲ್ಲಿ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸುವ ಪ್ರಸ್ತಾಪವಾಗುತ್ತದೆ. ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ಸಾಗಣೆಗೆ ಮುಂದಾದಾಗ ದನಗಳ ಮಾಲೀಕರು ರಾಜಕೀಯ ಒತ್ತಡ ಹೇರಿ ಮತ್ತೆ ಬೀದಿಗೆ ಬಿಡಿಸುತ್ತಾರೆ ಎನ್ನುವ ಆರೋಪವಿದೆ.
ಜೈನ್ ಸೇವಾ ಟ್ರಸ್ಟ್, ರಾಮಸಾಗರದ ಮಾನಸ ಗಂಗೋತ್ರಿ ಸೇವಾ ಟ್ರಸ್ಟ್‌ಗಳು ಗೋಶಾಲೆ ಆರಂಭಕ್ಕೆ ಜಮೀನು ನೀಡುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿವೆ. ಆದರೆ, ಟ್ರಸ್ಟ್‌ಗಳಿಗೆ ಭೂಮಿಯೂ ದೊರಕಲಿಲ್ಲ. ಇತ್ತ ಸರ್ಕಾರವೂ ಗೋಶಾಲೆ ಆರಂಭಿಸುತ್ತಿಲ್ಲ.
ಇದರಿಂದ ಬೀದಿಗೆ ಬರುವ ಬಿಡಾಡಿ ದನಗಳು ರಸ್ತೆಗಳ ಮಧ್ಯೆ ಠಿಕಾಣಿ ಹೂಡುವುದರಿಂದ ವಾಹನ ಸವಾರರ ಓಡಾಟಕ್ಕೆ ಸಮಸ್ಯೆಯಾಗಿದೆ. ಗೋಶಾಲೆ ಆರಂಭಕ್ಕೆ ಈಗಿನ ಸರ್ಕಾರ ಕೂಡಲೇ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಗೋಶಾಲೆಗಾಗಿ ಐದು ಎಕರೆ ಜಮೀನು ನೀಡಲು ಕೃಷಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಮಂಜೂರಾತಿ ಆದೇಶ ಬಂದ ತಕ್ಷಣ ಆರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.ಡಾ.ಸಿ.ಆರ್.ಅಭಿಲಾಷ, ಎಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಂಪ್ಲಿ ಕಂಪ್ಲಿ ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಿಡಿದು ಸುರಕ್ಷಿತವಾಗಿ ವಾಹನಕ್ಕೆ ಏರಿಸಿ, ಗೋಶಾಲೆಗೆ ಕಳುಹಿಸುವ ಕೌಶಲ, ತರಬೇತಿ ಪುರಸಭೆ ಸಿಬ್ಬಂದಿಗಿಲ್ಲ. ಕಳೆದ ಬಾರಿ ಬಿಡಾಡಿ ದನಗಳನ್ನು ಹಿಡಿಯುವಾಗ ಪುರಸಭೆ ಸಿಬ್ಬಂದಿ ಗಾಯಗೊಂಡಿದ್ದರು. ದನಗಳನ್ನು ಗೋಶಾಲೆಗೆ ಕಳುಹಿಸಲು ಪ್ರಮುಖ ತೊಡಕಾಗಿದೆ. ಬಿಡಾಡಿ ದನಗಳನ್ನು ಹಿಡಿದು ಸಾಗಿಸುವವರೂ ಸಿಗುತ್ತಿಲ್ಲ.ಎಂ.ವಸಂತಮ್ಮ,ಪ್ರಭಾರ ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ ಸರ್ಕಾರವೇ ಗೋಶಾಲೆ ತೆರೆಯಲು ಮುಂದಾದ ಪ್ರಯುಕ್ತ ಖಾಸಗಿ ಟ್ರಸ್ಟ್‌ನವರಿಗೆ ಭೂಮಿ ನೀಡಲು ಆಗದು. ಟ್ರಸ್ಟ್‌ನವರಿಗೆ ಈಗಾಗಲೇ ಹಿಂಬರಹ ನೀಡಲಾಗಿದೆ. ತುರ್ತಾಗಿ ಗೋಶಾಲೆ ಆರಂಭಕ್ಕೆ ಸೂಕ್ತ ಕ್ರಮವಹಿಸಲಾಗುವುದು.ಗೌಸಿಯಾ ಬೇಗಂ, ತಹಸೀಲ್ದಾರ್, ಕಂಪ್ಲಿ ಕಳೆದ ಹದಿನೆಂಟು ವರ್ಷಗಳಿಂದ ಗೋಶಾಲೆಗೆ ಭೂಮಿ ನೀಡುವಂತೆ ತಾಲೂಕು ಆಡಳಿತಕ್ಕೆ ಒತ್ತಾಯಿಸುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ. ಸರ್ಕಾರವಾದರೂ ಗೋಶಾಲೆ ತೆರೆಯುತ್ತಿಲ್ಲ. ಭೂಮಿ ನೀಡಿದರೆ ಗೋಶಾಲೆ ಆರಂಭಿಸುತ್ತೇವೆ.ರಾಜು ಹುಂಡಿಯಾ, ನಿರ್ದೇಶಕ, ಜೈನ್ ಸೇವಾ ಟ್ರಸ್ಟ್, ಕಂಪ್ಲಿ